

ಹಾವೇರಿ: ಎಣ್ಣೆ, ಎಣ್ಣೆ ಎಂದು ಚಡಪಡಿಸುತ್ತಿದ್ದ ಮದ್ಯ ಪ್ರಿಯರು ಇಂದಿನಿಂದ ಫುಲ್ಖುಷ್. ಸಾರಿಗೆ ಸಂಸ್ಥೆ ಬಸ್, ಖಾಸಗಿ ವಾಹನಗಳ ಓಡಾಟ ಮುಕ್ತ. ಕ್ಷೌರಿಕರಿಗೂ ಶುಭಾರಂಭ ತಂದುಕೊಟ್ಟ ಸೋಮವಾರ...!
ಕೇಂದ್ರ ಸರ್ಕಾರ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಮೇ 4ರಿಂದ ಆರಂಭವಾಗಲಿರುವ ಲಾಕ್ಡೌನ್ 3.0 ಜನತೆಗೆ ಸಿಕ್ಕಿರುವ ಮುಖ್ಯವಾದ ವಿನಾಯಿತಿ ಇವು.
ಜಿಲ್ಲೆ ಹಸಿರು ವಲಯದಲ್ಲಿರುವ ಕಾರಣ ಈಗಾಗಲೇ ಜಿಲ್ಲೆಯಲ್ಲಿ ವಾಣಿಜ್ಯ, ಆರ್ಥಿಕ ಚಟುವಟಿಕೆ ನಡೆಸಲು ಸರ್ಕಾರ ವಿನಾಯಿತಿ ನೀಡಿದೆ. ಬಸ್ ಸಂಚಾರ, ಮದ್ಯದಂಗಡಿ ಆರಂಭ, ಖಾಸಗಿ ವಾಹನ ಓಡಾಟ, ಸಲೂನ್ ಶಾಪ್ ಓಪನ್ಗೆ ಅವಕಾಶ ದೊರೆಯುತ್ತಿದೆ. ಇದರಿಂದ ಕರೊನಾದಿಂದ ಬಂದ್ ಆಗಿದ್ದ ಚಟುವಟಿಕೆಗಳು ಪುನಾರಂಭಗೊಳ್ಳುತ್ತಿದ್ದು, ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ.
ಮದ್ಯದಂಗಡಿ ಎದುರು ಭರ್ಜರಿ ಸಿದ್ಧತೆ: ಮೇ 4ರಿಂದ ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಿರುವುದು ಮದ್ಯಪ್ರಿಯರಿಗೆ ಭಾರಿ ಸಂತಸ ತಂದುಕೊಟ್ಟಿದೆ. ಸೋಮವಾರದಿಂದ ಎಂಆರ್ಪಿ ಮದ್ಯದಂಗಡಿಗಳು ತೆರೆಯುವ ಹಿನ್ನೆಲೆಯಲ್ಲಿ ಭಾನುವಾರ ಮದ್ಯದಂಗಡಿ ಎದುರು ಜನತೆ ಸಾಲಾಗಿ ಬರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 166 ಮದ್ಯ ಮಾರಾಟಗಾರರಿದ್ದು, ಆ ಪೈಕಿ ಸರ್ಕಾರದ ಮಾರ್ಗಸೂಚಿಯಂತೆ 80 ವೈನ್ ಶಾಪ್ ಹಾಗೂ 24 ಎಂಎಸ್ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವೈನ್ ಶಾಪ್ ಸಿಬ್ಬಂದಿ ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಕ್ಕಪಕ್ಕದಲ್ಲಿ ಉಗುಳುವುದನ್ನು ಮಾಡಬಾರದು, ವೈನ್ ಶಾಪ್ ಪ್ರವೇಶಕ್ಕೆ ಮತ್ತು ಹೊರಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ನೂಕುನುಗ್ಗಲು ಆಗುವ ಸಾಧ್ಯತೆ ಇರುವುದರಿಂದ ಪೊಲೀಸರನ್ನು ನಿಯೋಜಿಸಲು ಕೋರಿಕೊಳ್ಳಲಾಗಿದೆ. ಬೇಕಾದಷ್ಟು ಮದ್ಯ ದಾಸ್ತಾನಿದೆ ಎಂದು ಅಬಕಾರಿ ಉಪ ಆಯುಕ್ತೆ ಮಹಾದೇವಿ ಅವರು ತಿಳಿಸಿದ್ದಾರೆ.
ಬಸ್ಗಳು ಪುನರಾರಂಭ: ಇಂದು ಬೆಳಗ್ಗೆಯಿಂದಲೇ ಬಸ್ ಸಂಚಾರ ಆರಂಭವಾಗಲಿದ್ದು, ಮಾ. 22ರ ಜನತಾ ಕರ್ಫ್ಯೂ ದಿನದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಪುನಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುಮಾರು ಒಂದೂವರೆ ತಿಂಗಳ ಬಳಿಕ ಬಸ್ಗಳು ರಸ್ತೆಗಿಳಿಯಲು ಸಿದ್ಧತೆ ಮಾಡಿಕೊಂಡಿವೆ. ಲಾಕ್ಡೌನ್ ಮಾರ್ಗಸೂಚಿ ಅನ್ವಯ ಜಿಲ್ಲೆಯೊಳಗೆ ಮಾತ್ರ ಸಾರಿಗೆ ಸಂಸ್ಥೆ ಬಸ್ ಸಂಚಾರಕ್ಕೆ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಪ್ರತಿ ತಾಲೂಕಿನಲ್ಲಿ ತಲಾ 5 ಬಸ್ಗಳು ಕಾರ್ಯನಿರ್ವಹಿಸಲಿವೆ. ಪ್ರಯಾಣಿಕರ ಬೇಡಿಕೆ ಅನುಸಾರವಾಗಿ ಹೆಚ್ಚಿನ ಬಸ್ ಓಡಿಸಲು ಅಧಿಕಾರಿಗಳು ಸಿದ್ಧತೆ ನಡೆಸಿಕೊಂಡಿದ್ದಾರೆ. ಹೊರ ಜಿಲ್ಲೆಗೆ ಇಲ್ಲಿಂದ ಯಾವುದೇ ಬಸ್ ಸಂಚರಿಸುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿ ಬಸ್ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಿದ್ದು, ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಸದ್ಯ ಶೇ.50ರಷ್ಟು ಸಿಬ್ಬಂದಿ ಜಿಲ್ಲೆಯಲ್ಲೇ ಇದ್ದು ಅವರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಅಗತ್ಯತೆ ನೋಡಿಕೊಂಡು ಹೊರ ಜಿಲ್ಲೆಯಲ್ಲಿ ಸಿಲುಕಿಕೊಂಡ ನೌಕರರನ್ನು ಕರೆಯಿಸಿಕೊಳ್ಳಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ತಿಳಿಸಿದ್ದಾರೆ.
ಲಾಕ್ಡೌನ್ 2.0 ನಲ್ಲಿ ಹೋಟೆಲ್ ಸೇರಿ ಕೆಲ ಉದ್ಯಮಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ಕ್ಷೌರಿಕ ಅಂಗಡಿ ತೆರೆಯಲು ಅವಕಾಶ ನೀಡಿರಲಿಲ್ಲ. ಇದೀಗ ಲಾಕ್ಡೌನ್ 3.0ದಲ್ಲಿ ಕ್ಷೌರಿಕಗೂ ಅಂಗಡಿ ತೆರೆಯಲು ಅವಕಾಶ ಕಲ್ಪಿಸಿದ್ದು, ಕ್ಷೌರಿಕರಲ್ಲಿ ಸಂತಸ ತಂದೊಡ್ಡಿದೆ. ಒಟ್ಟಿನಲ್ಲಿ ಲಾಕ್ಡೌನ್ ಘೊಷಣೆಯಾದ ದಿನದಿಂದ ಬೀಕೋ ಎನ್ನುತ್ತಿದ್ದ ಜಿಲ್ಲೆಯ ಪ್ರಮುಖ ನಗರ, ಪಟ್ಟಣಗಳು ಇಂದಿನಿಂದ ಮತ್ತೇ ಸಹಜ ಸ್ಥಿತಿಯತ್ತ ಮರಳಲಿವೆ.