ರಸ್ತೆ, ಸೇತುವೆ ಅಭಿವೃದ್ಧಿ ಕಾಮಗಾರಿಗಳೂ ಲಾಕ್

11HLY-1(A)
Published on

ಹಳಿಯಾಳ: ಕಳೆದ ವರ್ಷ ಆದ ನೆರೆ, ಪ್ರವಾಹ ಅತಿವೃಷ್ಟಿಯಿಂದಾಗಿ ಕೊಚ್ಚಿಕೊಂಡು ಹೋದ ಪ್ರಮುಖ ಸಂಪರ್ಕ ರಸ್ತೆಗಳು, ಸೇತುವೆಗಳ ದುರಸ್ತಿಗೆ ಈಗ ಕರೊನಾ ಅಡ್ಡಗಾಲು ಹಾಕಿದ್ದರಿಂದ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಲಾಕ್ ಆಗಿವೆ.

ಪರಿಣಾಮ ಮಳೆಗಾಲದೊಳಗೆ ಈ ರಸ್ತೆ, ಸೇತುವೆ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೆ ತಾಲೂಕಿನಲ್ಲಿ ಸಂಚಾರದ ಬಹುದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಕೊಚ್ಚಿ ಹೋದವು ರಸ್ತೆ, ಸೇತುವೆ: ಕಳೆದ ವರ್ಷ ಸುರಿದ ಬಾರಿ ಮಳೆ ಹಾಗೂ ತಾಲೂಕಿನಲ್ಲಿ ಹರಿದಿರುವ ತಟ್ಟಿಹಳ್ಳದ ಪ್ರವಾಹದಿಂದಾಗಿ ಖಾನಾಪುರ-ತಾಳಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿನ ದುಸಗಿ ಸೇತುವೆ ಶಿಥಿಲಗೊಂಡಿತ್ತು. ಅಲ್ಲದೆ, ಸೇತುವೆ ಬಳಿಯ ರಸ್ತೆಯು ಕೊಚ್ಚಿ ಹೋಗಿತ್ತು. ತೇರಗಾಂವದಿಂದ ಹಳಿಯಾಳವರೆಗಿನ ರಸ್ತೆಯು ಸಂಪೂರ್ಣ ಹಾಳಾಗಿತ್ತು. ಇನ್ನು ಗ್ರಾಮಾಂತರ ಭಾಗದಲ್ಲಿ ತತ್ವಣಗಿ ಹಾಗೂ ಅಮ್ಮನಕೊಪ್ಪ ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆಯು ಶಿಥಿಲಗೊಂಡಿತ್ತು, ಜನಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಇರುವ ಏಕೈಕ ಸಂಪರ್ಕ ರಸ್ತೆಯಲ್ಲಿನ ಸೇತುವೆಯು ಶಿಥಿಲಗೊಂಡಿತ್ತು.

ದುರಸ್ತಿ, ನವೀಕರಣ: ಲೋಕೋಪಯೋಗಿ ಇಲಾಖೆಯು 20 ಲಕ್ಷ ರೂ. ವೆಚ್ಚದಲ್ಲಿ ದುಸಗಿ ಸೇತುವೆ ದುರಸ್ತಿ ಕಾರ್ಯ ಕೈಗೊಂಡಿದೆ. 5 ಕೋಟಿ ರೂ. ವೆಚ್ಚದಲ್ಲಿ ತೇರಗಾಂವದಿಂದ ಕೆಸರೊಳ್ಳಿವರೆಗೆ ಹಾಳಾಗಿರುವ ರಾಷ್ಟ್ರೀಯ ಹೆದ್ದಾರಿಯ ಡಾಂಬರೀಕರಣ ಕಾಮಗಾರಿ ಆರಂಭಗೊಂಡಿತ್ತು. ಇಂಜಿನಿಯರಿಂಗ್ ಕಾಲೇಜ್​ನಿಂದ ಕೆಸರೊಳ್ಳಿ ಕ್ರಾಸ್​ವರೆಗೆ ರಸ್ತೆ ಡಾಂಬರೀಕರಣ ಕಾರ್ಯ ಮುಗಿದಿದೆ. ತೇರಗಾಂವದಿಂದ ಗುತ್ತಿಗೆರೆ ಕೆರೆಯವರೆಗಿನ ಡಾಂಬರೀಕರಣ ಕಾರ್ಯ ಲಾಕ್​ಡೌನ್​ದಿಂದ ನಿಂತು ಹೋಗಿದೆ. ರಾಜ್ಯ ಆಯವ್ಯಯದಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಜನಗಾ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಸಾರ್ವಜನಿಕರ ಸಂಚಾರಕ್ಕಾಗಿ ಪಕ್ಕದ ಹೊಲದಿಂದ ತಾತ್ಕಾಲಿಕ ರಸ್ತೆಯ ವ್ಯವಸ್ಥೆ ಮಾಡಲಾಗಿದೆ. ಅಮ್ಮನಕೊಪ್ಪ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದರಿಂದ ನಬಾರ್ಡ್ ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ನೂತನ ಸೇತುವೆ ಕಾಮಗಾರಿ ಆರಂಭಗೊಂಡಿದ್ದು, ಜನಗಾ ಮತ್ತು ಅಮ್ಮನಕೊಪ್ಪ ಸೇತುವೆಯ ಸ್ಲಾ್ಯಬ್ ಕಾಮಗಾರಿ ನಡೆಯಬೇಕಿದೆ. ಲಾಕ್​ಡೌನ್​ದಿಂದ ದಿನಗೂಲಿಗಳಾಗಲಿ, ರಸ್ತೆ, ಸೇತುವೆ ನಿರ್ಮಾಣ ಸಾಮಗ್ರಿಗಳು ದೊರೆಯುವ ಸಾಧ್ಯತೆಗಳು ಕಡಿಮೆಯಾಗಿವೆ. ಮಳೆಗಾಲಕ್ಕೂ ಪೂರ್ವ ರಸ್ತೆ ಮತ್ತು ಸೇತುವೆಗಳ ಹಾಗೂ ಇನ್ನಿತರ ಅವಶ್ಯಕ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಿರುವ ಶಾಸಕ ಆರ್.ವಿ. ದೇಶಪಾಂಡೆ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳಿಸಲು ತಿಳಿಸಿದ್ದಾರೆ.

ಜಿಲ್ಲಾಡಳಿತ ಕಾಮಗಾರಿ ಆರಂಭಿಸಲು ಅನುಮತಿ ನೀಡಿದರೆ ಲಾಕ್ ಡೌನ್ ನಿಯಮ ಮತ್ತು ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿ ರಸ್ತೆ ಮತ್ತು ಸೇತುವೆಯ ಕಾಮಗಾರಿ ಮುಕ್ತಾಯಗೊಳಿಸುತ್ತೇವೆ. | ಆರ್.ಎಚ್. ಕುಲಕರ್ಣಿ ಲೋಕೋಪಯೋಗಿ ಎಇಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net