ರಸ್ತೆ ವಿಸ್ತರಣೆಗೆ ಅಡ್ಡಿಪಡಿಸಿದರೆ ಕ್ರಮ

Published on

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ ಗುಡಿಬಂಡೆ

ಇಲ್ಲಿನ ರಾಮಪಟ್ಟಣ ಮುಖ್ಯರಸ್ತೆ ಪಕ್ಕದ ಮನೆ ಮಾಲೀಕರು ರಸ್ತೆಯ ಮಧ್ಯಭಾಗದಿಂದ 20 ಅಡಿ ರಸ್ತೆ ವಿಸ್ತರಣೆಗೆ ಒಪ್ಪದಿದ್ದರೆ ಸರ್ಕಾರದ ಪೂರ್ವ ಆದೇಶದಂತೆ ರಸ್ತೆಯ ಮಧ್ಯಭಾಗದಿಂದ 43 ಅಡಿ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಎಚ್ಚರಿಸಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಮಪಟ್ಟಣದ ರಸ್ತೆ ವಿಸ್ತರಣೆ ವಿಚಾರವಾಗಿ ರಸ್ತೆ ಬದಿ ಮನೆ ಮಾಲೀಕರ ಸಮಸ್ಯೆಗಳನ್ನು ಅರಿತು ರಸ್ತೆ ಮಧ್ಯಭಾಗದಿಂದ ಕೇವಲ 20 ಅಡಿ ರಸ್ತೆ ವಿಸ್ತರಣೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ ಕೆಲವರು ಗಲಾಟೆ ಮಾಡಿ ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ. ಗಲಾಟೆ ಮುಂದುವರೆದಲ್ಲಿ ಅಧಿಕಾರಿಗಳು ಪೂರ್ವ ಆದೇಶದಂತೆ ರಸ್ತೆ ಮಧ್ಯಭಾಗದಿಂದ 43 ಅಡಿ ರಸ್ತೆ ವಿಸ್ತರಣೆ ಮಾಡಲಿದ್ದಾರೆ. ಈಗಾಗಲೇ ಗುಡಿಬಂಡೆಯಿಂದ ಕರಿಗಾನತಮ್ಮನಹಳ್ಳಿಯವರೆವಿಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಆರಂಭಿಸಿ, ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಎಇಇ ಪ್ರದೀಪ್‌ಗೆ ಸೂಚಿಸಿದರು.

100 ಎಕರೆಯಲ್ಲಿ ಎಪಿಎಂಸಿ

ಬೀಚಗಾನಹಳ್ಳಿ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ ಬಳಿ ಸುಮಾರು 100 ಎಕರೆ ಜಮೀನು ಗುರುತಿಸಿ, ದೊಡ್ಡ ಮಟ್ಟದಲ್ಲಿ ಎಪಿಎಂಸಿ ಪ್ರಾರಂಭಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಾರುಕಟ್ಟೆ ಮಾಡಿದರೆ ಹೆಚ್ಚು ವ್ಯಾಪಾರಸ್ಥರು ಆಗಮಿಸುತ್ತಾರೆ ಎಂದು ಶಾಸಕರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net