

ಕುಮಟಾ: ಸ್ಥಗಿತಗೊಂಡಿದ್ದ ಮೂರೂರು ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರ ಸೋಮವಾರ ಪುನಃ ಆರಂಭಿಸಿದ್ದಾರೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 7.81 ಕೋಟಿ ರೂ. ವೆಚ್ಚದಲ್ಲಿ ಮೂರೂರು ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಗುತ್ತಿಗೆದಾರರು ಅರ್ಧಮರ್ಧ ಕೆಲಸ ಮಾಡಿ ಕಾಮಗಾರಿ ಸ್ಥಗಿತಗೊಳಿಸಿ ಹಲವು ತಿಂಗಳುಗಳೇ ಕಳೆದಿದ್ದವು. ಇದರಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ರಸ್ತೆಯಂಚಿನ ತಗ್ಗಿನಲ್ಲಿ ನಿತ್ಯ ವಾಹನ ಸವಾರರು ಬಿದ್ದು ಪೆಟ್ಟುಮಾಡಿಕೊಳ್ಳುತ್ತಿರುವ ಬಗ್ಗೆ ಸಂಬಂಧಪಟ್ಟವರನ್ನು ಪ್ರಶ್ನಿಸಿದ್ದರು.
ಈ ಬಗ್ಗೆ ವಿಜಯವಾಣಿಯಲ್ಲಿ ‘ಅಪಾಯಕಾರಿಯಾಗಿದೆ ರಸ್ತೆ ಕಾಮಗಾರಿ’ ಎಂಬ ಶೀರ್ಷಿಕೆಯಡಿ ಮಾ. 12ರಂದು ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿ ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಡಲೇ ಗುತ್ತಿಗೆದಾರ ಭಟ್ಕಳದ ಪಿಬಿಐ ಕನ್ಸ್ಟ್ರಕ್ಷನ್ ಕಂಪನಿಯ ಮೂಲಕ ಪುನಃ ಕಾಮಗಾರಿ ಆರಂಭಿಸಿದ್ದಾರೆ. ಇದೀಗ ರಸ್ತೆಯಂಚಿಗೆ ತೆಗೆದಿದ್ದ ತಗ್ಗಿಗೆ ಜಲ್ಲಿ ತುಂಬಿ ಸಪಾಟು ಮಾಡಲಾಗುತ್ತಿದೆ.