

ಕಿಕ್ಕೇರಿ: ಸಾರ್ವಜನಿಕರ ಸಂಪರ್ಕ ಸೇತುವೆಯಾಗಿರುವ ರಸ್ತೆಗಳ ಅಭಿವೃದ್ಧಿಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
ಚನ್ನರಾಯಪಟ್ಟಣ-ಮೈಸೂರು ರಾಜ್ಯ ಹೆದ್ದಾರಿ ತಿರುವಿನಲ್ಲಿ ಹೋಬಳಿಯ ಮಾದಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, 8 ಕಿ.ಮೀ. ಉದ್ದದ ರಸ್ತೆಯನ್ನು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ರಸ್ತೆ ಅಭಿವೃದ್ಧಿಯಾಗುವುದರಿಂದ ಮಾದಾಪುರ, ಚಿನ್ನೇನಹಳ್ಳಿ, ಗೊಂದಿಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನತೆಗೆ ಅನುಕೂಲವಾಗಲಿದೆ.
ವಿವಿಧ ಯೋಜನೆಗಳಡಿಯಲ್ಲಿ ರಸ್ತೆ ಅಭಿವೃದ್ಧಿಗೆ ಹಲವು ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಮಾಡಲಾಗುತ್ತಿದೆ. ತಾಲೂಕಿನ ರಸ್ತೆ ಅಭಿವೃದ್ಧಿಗೆ ಅನುದಾನದ ಕೊರತೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದೊಂದಿಗೆ ನಿರಂತರ ಅನುದಾನ ತರಲು ಹೋರಾಟ ಮಾಡುವ ಸ್ಥಿತಿ ಇದೆ. ನಾವು ಬಂದಿರುವುದು ಕ್ಷೇತ್ರದ ಅಭಿವೃದ್ಧಿಗಾಗಿ. ಜನತೆ ಆಶೀರ್ವಾದ ಮಾಡಿ ಕಳಿಸಿದ್ದಾರೆ. ಇರುವ ಅವಧಿಯಲ್ಲಿ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿ ಮಾಡಬೇಕು. ರಾಜಕೀಯ ಚುನಾವಣೆ ವೇಳೆ. ಈಗ ಬೇಕಿರುವುದು ಕ್ಷೇತ್ರದ ಅಭಿವೃದ್ಧಿ ಮಾತ್ರ ಎಂದರು.
20-25 ದಿನ ಕ್ಷೇತ್ರದಾದ್ಯಂತ ಪ್ರವಾಸ: ಸದ್ಯದ ಪರಿಸ್ಥಿತಿಯಲ್ಲಿ ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂಬ ಅರಿವು ನನ್ನ ತಾಲೂಕಿನ ಮತದಾರರಿಗೆ ಇದೆ. ಸರ್ಕಾರ ಹೇಗೆ ಶಾಸಕರಿಗೆ ಸ್ಪಂದನೆ ಮಾಡುತ್ತಿದೆ ಎಂಬುದನ್ನು ಪ್ರತಿದಿನ ಪತ್ರಿಕೆ, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದಾರೆ. ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಜನರ ಕಷ್ಟಸುಖಗಳಿಗೆ ನನ್ನ ಕೈಲಾದಷ್ಟು ಸ್ಪಂಧಿಸುವ ಕೆಲಸ ಮಾಡುತ್ತಿದ್ದೇನೆ. ತಿಂಗಳಲ್ಲಿ 25 ದಿನ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದೇನೆ ಎಂದರು.
ಕಿಕ್ಕೇರಿ ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿಮಂಜೇಗೌಡ, ತಾಪಂ ಮಾಜಿ ಸದಸ್ಯ ಐಕನಹಳ್ಳಿಕೃಷ್ಣೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಶೇಖರ್, ಗ್ರಾಪಂ ಮಾಜಿ ಸದಸ್ಯ ಶೇಖರ್, ಮುಖಂಡರಾದ ದೇವೇಗೌಡ, ಧರ್ಮರಾಜು, ಅಶೋಕ್, ಯೋಗಣ್ಣ, ಅಣ್ಣೇಗೌಡ, ಮುರುಳೀಧರ್, ಸಂದೀಪ್, ಕಾಂತರಾಜು, ಎಇಇ ಬೋರಯ್ಯ, ಎಇ ಬಸವೇಗೌಡ, ಜೆಇ ಕೃಷ್ಣಮೂರ್ತಿ, ಗುತ್ತಿಗೆದಾರ ಆರ್.ಪಿ. ರೇವಣ್ಣ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಇದ್ದರು.