ರಸ್ತೆ ಅಪಘಾತ ತಡೆಗೆ ಕ್ರಮ

bkt-7-1
Published on

ಬಾಗಲಕೋಟೆ: ಪ್ರತಿಯೊಬ್ಬರ ಜೀವ ಅಮೂಲ್ಯವಾಗಿದ್ದು, ರಸ್ತೆ ಅಪಘಾತದಿಂದ ಉಂಟಾಗುವ ಸಾವು-ನೋವುಗಳ ತಡೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಕೃತಿ ವಿಕೋಪದಿಂದ ಉಂಟಾಗುವ ಹಾನಿಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿದಾಗ ಅಪಘಾತ ತಡೆಯಲು ಸಾಧ್ಯವಿದೆ ಎಂದರು. ಆ ನಿಟ್ಟಿನಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ವಾಹನ ಸವಾರರಿಗೆ ರಸ್ತೆ ನಿಯಮ ಪಾಲನೆಗೆ ಜಾಗೃತಿ ಮೂಡಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಯಾವುದೇ ಒಂದು ರಸ್ತೆ ಅಪಘಾತ ಸಂಭವಿಸಿದಲ್ಲಿ ಕೇಲವ ಪೊಲೀಸ್ ಇಲಾಖೆ ಮಾತ್ರ ಜವಾಬ್ದಾರಿ ಅಲ್ಲ. ಇದಕ್ಕೆ ಸಂಬಂಧಿಸಿದ ಇಲಾಖೆ ಹಾಗೂ ಸಾರ್ವಜನಿಕರು ಕೂಡಾ ಜವಾಬ್ದಾರಿಯಾಗಿರುತ್ತಾರೆ. ಅಪಘಾತ ಸಂಭವಿಸುವ ಸ್ಥಳಗಳಲ್ಲಿ ರಸ್ತೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ವಾಹನ ಪಾರ್ಕಿಂಗ್, ಸುಗಮ ಸಂಚಾರಕ್ಕೆ ಅನುವು ಸೇರಿದಂತೆ ಎಚ್ಚರಿಕೆ ಫಲಕ, ಸಿಗ್ನಲ್ ಅಳವಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು. ಅಪಘಾತ ವಲಯಗಳಲ್ಲಿ ಕಾಮಗಾರಿ ಕೈಗೊಳ್ಳಲು ರಸ್ತೆ ನಿರ್ವಹಣೆಗಾಗಿ ಅನುದಾನ ಮೀಸಲಿರಿಸಲು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ರಸ್ತೆ ನಿರ್ಮಾಣಕ್ಕೆ ಸರಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಆ ಹಣ ಸಾರ್ವಜನಿಕರ ಹಣವಾಗಿದ್ದು, ಗುಣಮಟ್ಟದಿಂದ ಕೂಡಿದ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣಗೊಳ್ಳಬೇಕು. ರಸ್ತೆಗಳಲ್ಲಿ ಅಘಪಾತ ಸಂಭವಿಸದಂತೆ ಎಚ್ಚರಿಕೆ ಫಲಕ, ಸಿಗ್ನಲ್. ಮಾರ್ಕಿಂಗ್ ಹಾಕಬೇಕು. ಇದರ ಜೊತೆಗೆ ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅಪಘಾತದಿಂದಾಗುವ ಪ್ರಾಣಹಾನಿಗಳನ್ನು ತಪ್ಪಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಪ್ರತಿ ವರ್ಷ ಕಬ್ಬು ಕಟಾವು ಹಂಗಾಮಿ ವೇಳೆಯಲ್ಲಿ ಕಬ್ಬುಗಳನ್ನು ಸಾಗಿಸುವ ಟ್ಯಾಕ್ಟರಗಳಿಂದ ಸಾವುಗಳು ಸಂಭವಿಸುತ್ತಿವೆ. ಇದಕ್ಕೆ ಸಕ್ಕರೆ ಕಾರ್ಖಾನೆಗಳು ಜವಾಬ್ದಾರರಾಗುತ್ತಿರಿ. ಟ್ಯಾಕ್ಟರಗಳ ಹಿಂಬದಿಯಲ್ಲಿ ಮಿಂಚು ಪಟ್ಟಿಯನ್ನು ಕಡ್ಡಾಯವಾಗಿ ಅಳವಡಿಸುವದ ಜೊತೆಗೆ ಧ್ವನಿವರ್ಧಕ ಬಳಸುವದನ್ನು ನಿಲ್ಲಿಸಬೇಕು. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಂತಹ ಟ್ಯಾಕ್ಟರಗಳ ಮೇಲೆ ಕ್ರಮಕೈಗೊಳ್ಳಲು ತಿಳಿಸದ ಅವರು ಅಧಿಕಾರಿಗಳು ಸಹ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸರಕಾರಿ ಕೆಲಸಕ್ಕೆ ಸೇರಿದ ಮೇಲೆ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲು ತಿಳಿಸಿದರು.

ಅಪಘಾತ ತಡೆಗೆ ಪೊಲೀಸ್ ಇಲಾಖೆ ಹಲವಾರು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ 16 ಕಡೆಗಳಲ್ಲಿ ಜಿಗ್‍ಜಾಗ್ ಬ್ಯಾರಿಕೇಡ ನಿರ್ಮಿಸಲಾಗಿದೆ. ಹೆಲ್ಮೆಟ್ ಧರಿಸುವ ಕಡ್ಡಾಯ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇಲಾಖೆಯ ಬೇಜವಾಬ್ದಾರಿಯಿಂದ ಉಂಟಾಗು ಸಾವು-ನೋವುಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಮೇಲೆ ಹಾಕುವಂತಿಲ್ಲ. ಈ ರೀತಿಯ ವರ್ತನೆ ಅನುಸರಿಸುವವರ ಮೇಲೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ರಸ್ತೆ ಅಪಘಾತದಿಂದಾಗಿ ಸಾವು-ನೋವುಗಳ ಮಾಹಿತಿಯನ್ನು ಸಭೆಗೆ ತಿಳಿಸುವದರ ಜೊತೆಗೆ ಅಪಘಾತ ತಡೆಗೆ ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು.

ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಲ್.ಹೊಸಮನಿ, ಲೋಕೋಪ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಕಡಿವಾಲರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net