

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿಯ ಶ್ರೀ ವಿನಾಯಕ ದೇವರ ರಥೋತ್ಸವ ರಥಸಪ್ತಮಿ ದಿನವಾದ ಶನಿವಾರ ವಿಜೃಂಭಣೆಯಿಂದ ನಡೆಯಿತು. ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಆರತಿ, ಹಣ್ಣುಕಾಯಿ, ಪಂಚ ಕಜ್ಜಾಯ ಹಾಗೂ ವಿವಿಧ ಸೇವೆಗಳನ್ನು ಸಲ್ಲಿಸಿದರು. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸ ಜರುಗಿತು.
ಗೋರೆ, ಬ್ರಹ್ಮೂರಲ್ಲಿ ತೇರು ಎಳೆದ ಭಕ್ತರು
ಕುಮಟಾ: ರಥಸಪ್ತಮಿ ಪ್ರಯುಕ್ತ ತಾಲೂಕಿನ ಗೋರೆ, ಬ್ರಹ್ಮೂರು ಹಾಗೂ ಕುಮಟಾದ ರಥ ಬೀದಿಯಲ್ಲಿ ಶನಿವಾರ ಜರುಗಿದ ವಾರ್ಷಿಕ ಮಹಾರಥೋತ್ಸವದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ದೇವರ ಸಾಲಂಕೃತ ತೇರನ್ನೆಳೆಯುವ ವೈಭವವನ್ನು ಕಣ್ತುಂಬಿಕೊಂಡರು.
ಕುಮಟಾ ತೇರು ಎಂದೇ ಖ್ಯಾತವಾದ ಪಟ್ಟಣದ ರಥಬೀದಿಯ ಶ್ರೀ ಮುಖ್ಯಪ್ರಾಣಾಂತರ್ಗತ ಶ್ರೀ ವೆಂಕಟ್ರಮಣ ದೇವರ ವಾರ್ಷಿಕ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಪರ್ತಗಾಳಿ ಮಠಾಧೀಶ ಶ್ರೀ ವಿದ್ಯಾಧಿರಾಜತೀರ್ಥ ವಡೆಯರ್ ಸ್ವಾಮೀಜಿ ಹಾಗೂ ಪಟ್ಟಶಿಷ್ಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಉಪಸ್ಥಿತರಿದ್ದು ತೇರನ್ನೆಳೆಯುವ ಪುಣ್ಯಪರ್ವಕ್ಕೆ ವಿಶೇಷ ಮೆರುಗು ತಂದರು.
ಉಭಯ ಶ್ರೀಗಳು ತೇರನ್ನೇರಿ ಉತ್ಸವ ಮೂರ್ತಿಯ ಪೂಜೆಗೈದು ನೆರೆದ ಭಕ್ತಾದಿಗಳಿಗೆ ತೇರಿನ ಮೇಲಿಂದಲೇ ಪಾರಂಪರಿಕ ಪ್ರಸಾದ, ನಾಣ್ಯ ಹಾಗೂ ಹಣ್ಣು ಹಂಪಲು ಚಿಮ್ಮಿದರು. ತೇರನ್ನು ಮೂರುಕಟ್ಟೆಯವರೆಗೂ ಎಳೆದು ಪೂಜೆ ಸಲ್ಲಿಸಿ ಮರಳಿ ಸ್ವಸ್ಥಾನಕ್ಕೆ ತರಲಾಯಿತು. ಜಾತ್ರೆಯ ಪ್ರಯುಕ್ತ ಪೇಟೆ ಕಳೆಗಟ್ಟಿದ್ದು ಬೀದಿಯ ಎರಡೂ ಬದಿಗಳಲ್ಲಿ ತರಾವರಿ ಅಂಗಡಿಗಳ ಸಾಲು ಜನರನ್ನು ಆಕರ್ಷಿಸಿದವು.
ಗೋರೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿಯನ್ನು ತೇರಿನಲ್ಲಿಟ್ಟು ಎಳೆಯಲಾಯಿತು. ಗೋರೆ ಹಾಗೂ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು ತೇರನ್ನೆಳೆಯುವ ಸಂಭ್ರಮಕ್ಕೆ ಸಾಕ್ಷಿಯಾದರು.
ಬ್ರಹ್ಮೂರಿನಲ್ಲಿ ಪುರಾತನ ಶ್ರೀ ಚನ್ನಕೇಶವ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ಪ್ರಸಿದ್ಧಿ ಹೆಚ್ಚಿಸಿಕೊಳ್ಳುತ್ತಿದ್ದು, ಈ ಬಾರಿ ಅಪಾರ ಸಂಖ್ಯೆಯ ಭಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಾತ್ರೆಯ ಪ್ರಯುಕ್ತ ಮಂದಿರದಲ್ಲಿ ವಿಶೇಷ ಧಾರ್ವಿುಕ ಅನುಷ್ಠಾನ ಹಾಗೂ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಮಹಾಬಲೇಶ್ವರ ಮಹಾರಥಕ್ಕೆ ಪೂಜೆ
ಗೋಕರ್ಣ: ರಥಸಪ್ತಮಿ ನಿಮಿತ್ತ ಮಹಾಬಲೇಶ್ವರ ಮಹಾರಥಕ್ಕೆ ಪಾರಂಪರಿಕ ಉಪಾಧಿವಂತ ವೇ. ನಾರಾಯಣ ಪಂಡಿತರ ನೇತೃತ್ವದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರು ರಥದ ಮನೆಯಿಂದ ಮಹಾರಥವನ್ನು ಎಳೆದು ಹೊರಕ್ಕೆ ತಂದರು. ಮಹಾಶಿವರಾತ್ರಿ ವೇಳೆ ಸಾಲಂಕೃತಗೊಂಡು ಎಳೆಯಲ್ಪಡುವ ಈ ಮಹಾರಥದ ಕಟ್ಟೋಣ ಕಾರ್ಯವನ್ನು ರಥಸಪ್ತಮಿ ಪರ್ವ ದಿನದಂದು ಪ್ರಾರಂಭಿಸಲಾಗುತ್ತದೆ. ಮಂದಿರದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಮತ್ತು ರಥದ ಕಟ್ಟೋಣ ಕಾರ್ಯಕ್ಕೆ ಸಂಬಂಧಿಸಿದ ವಿವಿಧ ಸಮಾಜ ಪ್ರತಿನಿಧಿಗಳು ಉಪಸ್ಥಿತರಿದ್ದರು. ಫೆ. 24ರಂದು ಮಹಾಶಿವರಾತ್ರಿ ನಿಮಿತ್ತ ಮಹಾರಥೋತ್ಸವ ನಡೆಯಲಿದೆ.
ಉಳವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ
ಜೊಯಿಡಾ: ಉಳವಿ ಚನ್ನ ಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ ಷಟಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಶನಿವಾರ ರಥಸಪ್ತಮಿಯಂದು ಅಧಿಕೃತ ಚಾಲನೆ ನೀಡಿದರು.
ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಜಾತ್ರೆ ಪ್ರತಿ ವರ್ಷ ರಥಸಪ್ತಮಿಯಿಂದ 10 ದಿನಗಳ ಕಾಲ ನಡೆಯುತ್ತದೆ. ಈ ಜಾತ್ರಾ ಮಹೋತ್ಸವದ ಪ್ರಮುಖಘಟ್ಟ ಶ್ರೀ ಚನ್ನಬಸವೇಶ್ವರ ಮಾಹಾರಥೋತ್ಸವ ಫೆಬ್ರವರಿ 10 ರಂದು ಭಾರತ ಹುಣ್ಣಿಮೆಯ ಮಘಾ ನಕ್ಷತ್ರದಲ್ಲಿ ನಡೆಯಲಿದೆ.
ಜಾತ್ರಾ ಪ್ರಾರಂಭೋತ್ಸವ ಸಂದರ್ಭದಲ್ಲಿ ಉಳವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ, ಪ್ರಧಾನ ಅರ್ಚಕ ಶಂಕ್ರಯ್ಯ ಕಲ್ಮಠ ಶಾಸ್ತ್ರಿ, ಉಳವಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಮೊಕಾಶಿ, ಮಲ್ಲಿಕಾರ್ಜುನ ಉಪ್ಪಿನಮಠ ಹಾಗೂ ಉಳವಿ ಪ್ರೌಢಶಾಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.