ರಟ್ಟಿಹಳ್ಳಿಗೆ ಸಿದ್ದರಾಮಯ್ಯ ಭೇಟಿ 11ರಂದು

09 rtl 01
Published on

ರಟ್ಟಿಹಳ್ಳಿ: ತಾಲೂಕಿನ ರೈತರು ಶಿಕಾರಿಪುರ ನೀರಾವರಿ ಯೋಜನೆ ವಿರೋಧಿಸಿ ಕೈಗೊಂಡಿರುವ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ರೈತರ ಸಮಸ್ಯೆಗಳನ್ನು ಆಲಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಡಿ. 11ರಂದು ಮಧ್ಯಾಹ್ನ 2 ಗಂಟೆಗೆ ರಟ್ಟಿಹಳ್ಳಿಗೆ ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಶಿಕಾರಿಪುರ ತಾಲೂಕಿನ ಉಡುಗಣಿ- ತಾಳಗುಂದ- ಹೊಸೂರು ಕೆರೆಗಳಿಗೆ ನೀರು ತುಂಬಿಸಲು ಅವಳಿ ತಾಲೂಕಿನ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ರೈತರ ಫಲವತ್ತಾದ ಭೂಮಿ ಕಳೆದುಕೊಳ್ಳಬೇಕಾಗಿದ್ದು, ಸಣ್ಣ ಹಿಡುವಳಿದಾರರು ಬೀದಿಗೆ ಬರಬೇಕಾಗುತ್ತದೆ. ಹೀಗಾಗಿ ಯೋಜನೆ ವಿರೋಧಿಸಿ ಹಿರಿಯ ವಕೀಲರಾದ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ರೈತರು ಕಳೆದ ವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಆದರೆ, ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಯೋಜನೆಗೆ ಮೊದಲು ಹೊನ್ನಾಳಿ ತಾಲೂಕಿನಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಭೂಮಿ ಆಯ್ದುಕೊಂಡಾಗ ಅಲ್ಲಿಯ ಜನಪ್ರತಿನಿಧಿಗಳು ವಿರೋಧಿಸಿದರು. ಹೀಗಾಗಿ ಇದು ನಮ್ಮ ತಾಲೂಕಿಗೆ ಬಂದಿದೆ. ಯೋಜನೆಗಾಗಿ ನಮ್ಮ ತಾಲೂಕಿನಲ್ಲಿ ಮಾತ್ರ ಭೂ ಸ್ವಾಧೀನ ಮಾಡಿಕೊಳ್ಳುವುದು ಸರಿಯಲ್ಲ ಎಂದರು.

ಜಿ.ಪಂ. ಸದಸ್ಯ ಏಕನಾಥ ಬಾನವಳ್ಳಿ ಮಾತನಾಡಿ, ಯೋಜನೆ ವಿರೋಧಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಜಿಲ್ಲೆಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಬಿ.ಸಿ. ಪಾಟೀಲ ರೈತರ ಸಮಸ್ಯೆ ರ್ಚಚಿಸದಿರುವುದು ದುರದೃಷ್ಟಕರ. ರೈತರ ಜಮೀನು ಸ್ವಾಧೀನ ಮಾಡಿಕೊಳ್ಳದೆ ಗುಡ್ಡದ ಮಾರ್ಗ ಅಥವಾ ರಸ್ತೆಯ ಬದಿಯಲ್ಲಿ ಕಾಮಗಾರಿ ಮಾಡಿಕೊಂಡರೆ ನಮ್ಮ ಅಭ್ಯಂತರವಿಲ್ಲ ಎಂದರು.

ಎಸ್.ಕೆ. ಕರಿಯಣ್ಣನವರ, ಜಿ.ಪಂ. ಸದಸ್ಯ ಪ್ರಕಾಶ ಬನ್ನಿಕೋಡ, ಪಿ.ಡಿ. ಬಸನಗೌಡ್ರ, ರಮೇಶ ಮಡಿವಾಳರ, ದಿಗ್ವಜಯ ಹತ್ತಿ, ವಸಂತ ದ್ಯಾವಕ್ಕಳವರ, ಎ.ಕೆ. ಪಾಟೀಲ, ವೀರನಗೌಡ್ರ ಪ್ಯಾಟಿಗೌಡ್ರ, ಸರ್ಪರಾಜ ಮಾಸೂರು, ಮಾಲತೇಶಯ್ಯ ಪಾಟೀಲ, ಖಲೀಲಅಹ್ಮದ್ ಸವಣೂರ, ಸುರೇಶ ಮಾಡಿವಾಳರ ಇದ್ದರು.

ರಕ್ತಕ್ರಾಂತಿಗೆ ಅವಕಾಶ ನೀಡಬೇಡಿ
ಸರ್ಕಾರ ರೈತರ ಪ್ರತಿಭಟನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಇದು ಹೀಗೆಯೇ ಮುಂದುವರಿದರೆ ರೈತರು ಅನಿವಾರ್ಯವಾಗಿ ರಕ್ತಕಾಂತ್ರಿಯ ಹಾದಿ ಹಿಡಿಯುತ್ತಾರೆ. ಇದಕ್ಕೆ ಸರ್ಕಾರ ಅವಕಾಶ ನೀಡದೇ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಬೇಕು ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net