ರಟ್ಟಿಹಳ್ಳಿ ತಾಪಂ ಪ್ರಥಮ ಅಧ್ಯಕ್ಷ ದಿಳ್ಳೆಪ್ಪ

10 rtl 01
Published on

ರಟ್ಟಿಹಳ್ಳಿ: ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ದಿಳ್ಳೆಪ್ಪ ನಿಂಗಪ್ಪ ಹಳ್ಳಳ್ಳಿ ಮತ್ತು ಉಪಾಧ್ಯಕ್ಷರಾಗಿ ಭರಮಪ್ಪ ದ್ಯಾಮಪ್ಪ ಯಲೆದಹಳ್ಳಿ ಅವಿರೋಧವಾಗಿ ಆಯ್ಕೆಯಾದರು.

ಶುಕ್ರವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಹಿಂದುಳಿದ ವರ್ಗ ಪ್ರವರ್ಗ ‘ಅ’ಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಹುಲ್ಲತ್ತಿ ಕ್ಷೇತ್ರದ ದಿಳ್ಳೆಪ್ಪ ಹಳ್ಳಳ್ಳಿ ಹಾಗೂ ಅನುಸೂಚಿತ ಪಂಗಡಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಕರಿ ಕ್ಷೇತ್ರದ ಭರಮಪ್ಪ ಯಲೆದಹಳ್ಳಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿ, ಹಾವೇರಿ ಉಪವಿಭಾಗಾಧಿಕಾರಿ ಡಾ.ದಿನೇಶ್ ಶಶಿ ಅವರು ಅವಿರೋಧ ಆಯ್ಕೆ ಘೊಷಿಸಿದರು.

ತಾ.ಪಂ. ಸದಸ್ಯರಾದ ಮಹೇಶಪ್ಪ ಗುಬ್ಬಿ, ಹೇಮಪ್ಪ ಮುದರೆಡ್ಡಿ, ಬಂಗಾರಪ್ಪ ಇಕ್ಕೇರಿ, ಮೆಹಬೂಬಸಾಬ್ ಮುಲ್ಲಾ, ರೇವಣಪ್ಪ ಯರಳ್ಳಿ, ಸುಧಾ ಪಾಟೀಲ, ಗೀತಾ ದನವಿನಮರ, ಸುಜಾತಾ ಕೊಟಗಿಮನಿ, ಚಂದ್ರಪ್ಪ ಸಾಸ್ವಿಹಳ್ಳಿ ಇದ್ದರು.

ಅಭಿವೃದ್ಧಿಗೆ ಸಹಕಾರ: ನಂತರ ತಾ.ಪಂ. ಸಭಾಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಮಾಸೂರು ಕ್ಷೇತ್ರದ ಬಂಗಾರಪ್ಪ ಇಕ್ಕೇರಿ, ದಿಳ್ಳೆಪ್ಪ ಹಳ್ಳಳ್ಳಿ ಆಕಾಂಕ್ಷಿಯಾಗಿದ್ದರು. ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ಬಿಜೆಪಿ ಮುಖಂಡರೊಂದಿಗೆ ರ್ಚಚಿಸಿ, 10 ತಿಂಗಳ ಅವಧಿಯನ್ನು ತಲಾ 5 ತಿಂಗಳಿನಂತೆ ವಿಂಗಡಿಸಿ ಇಬ್ಬರಿಗೂ ಅವಕಾಶ ನೀಡಲು ತೀರ್ವನಿಸಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ನಾಗವಂದ ಕ್ಷೇತ್ರದ ಸುಜಾತಾ ಕೊಟಗಿಮನಿ ಆಕಾಂಕ್ಷಿಯಾಗಿದ್ದರು. ಅವರಿಗೂ ಮುಂದೆ ಅವಕಾಶ ನೀಡಲು ತೀರ್ವನಿಸಲಾಗಿದೆ ಎಂದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ರಟ್ಟಿಹಳ್ಳಿ ತಾಲೂಕಿಗೆ ಅವಶ್ಯವಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ತಾಲೂಕಿನ ಅಭಿವೃದ್ಧಿಗೆ ನಾವೆಲ್ಲರೂ ಸಹಕಾರ ನೀಡುತ್ತೇವೆ ಎಂದರು.

ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ರಟ್ಟಿಹಳ್ಳಿ ತಾಲೂಕು ಪಂಚಾಯಿತಿಗೆ ಅವಶ್ಯವಿರುವ ನೂತನ ಕಟ್ಟಡ ನಿರ್ಮಾಣ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.

ದಿಳ್ಳೆಪ್ಪ ಹಳ್ಳಳ್ಳಿ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿದರು.

ತಾ.ಪಂ. ಇಒ ಕೆ.ಸಿ. ಮೋಹನಕುಮಾರ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ ವಿಜಯೋತ್ಸವ ಆಚರಿಸಕೂಡದು ಎಂದು ತಿಳಿಸಿದರು.

ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ತಾ.ಪಂ. ಮಾಜಿ ಸದಸ್ಯ ಆರ್.ಎನ್. ಗಂಗೋಳ, ಡಿ.ಸಿ. ಪಾಟೀಲ, ಹಿರೇಕೆರೂರು ತಾ.ಪಂ. ಅಧ್ಯಕ್ಷ ರಾಜು ಬಣಕಾರ, ಸುಭಾಷ ಹದಡೇರ, ಎಸ್.ಬಿ. ಪಾಟೀಲ, ಶಂಭಣ್ಣ ಗೂಳಪ್ಪನವರ ಇತರರು ಇದ್ದರು. ಗ್ರಾ.ಪಂ. ಸದಸ್ಯ ದೇವರಾಜ ನಾಗಣ್ಣನವರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net