

ಬಾಗಲಕೋಟೆ: ರಜೆಗಾಗಿ ಊರಿಗೆ ಬಂದಿದ್ದ ಭಾರತೀಯ ಸೇನೆಯ ಯೋಧ ತನ್ನ ಬಾಮೈದನಿಂದಲೇ ಭೀಕರ ಹತ್ಯೆಗೆ ಒಳಗಾಗಿರುವ ಘಟನೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಯೋಧನ ಪತ್ನಿ ಗಂಡನ ಬಗ್ಗೆ ತನ್ನ ಸಹೋದರನಿಗೆ ಮತ್ತೆ ಮತ್ತೆ ದೂರ ನೀಡಿತ್ತಿದ್ದಳು. ಗುರುವಾರ ರಾತ್ರಿಯೂ ಅದು ಮುಂದುವರೆದಿತ್ತು. ಇದರಿಂದ ಚಾಕು ಸಮೇತ ಯೋದನ ಮನೆಗೆ ಆಗಮಿಸಿ ಬಾಮೈದ ಸಹೋದರಿ ಗಂಡನನ್ನು ಕೂಗಿ ಹೊರ ಕರೆದು ಭೀಕರವಾಗಿ ಹತ್ಯೆಗೈದಿದ್ದಾನೆ.
ಬಾದಾಮಿ ತಾಲೂಕಿನ ಕೆರೂರ ಪೊಲೀಸ್ ಠಾಣೆಯ ನೀರಲಕೇರಿ ಗ್ರಾಮದ ಕರಿಸಿದ್ದಪ್ಪ ಕಳಸದ(28) ಕೊಲೆಯಾಗಿರುವ ದುರ್ದೈವಿ
ಸೈನಿಕ. ಕಳೆದ ಹತ್ತು ದಿನಗಳ ಹಿಂದೆ ರಜೆಗಾಗಿ ಊರಿಗೆ ಬಂದಿದ್ದ. ಗುರುವಾರ ರಾತ್ರಿ ಯೋಧನ ಪತ್ನಿ ವಿದ್ಯಾಶ್ರೀ ಅವರ ಸಹೋದರ ಧರಿಗೌಡ ದೂಳಪ್ಪನವರ ಚಾಕುವಿನಿಂದ ಕತ್ತಿಗೆ, ಹೊಟ್ಟೆ, ಸೊಂಟಕ್ಕೆ ಇರಿದು ಯೋಧನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಸದ್ಯ ಕೊಲೆಗೆ ಸಂಬಂಧಿಸಿದಂತೆ ಕೆರೂರ ಠಾಣೆ ಪೊಲೀಸರು ಯೋಧನ ಪತ್ನಿ ವಿದ್ಯಾಶ್ರೀ, ಬಾಮೈದ ಧರಿಗೌಡ, ಅತ್ತೆ ಶಾಂತವ್ವ, ಮಾವ ಫಕೀರಗೌಡ ಅವರನ್ನು ಪೊಲೀಸರು ಬಂಸಿದ್ದು, ತನಿಖೆ ಮುಂದುವರೆಸಿದ್ದಾಗಿ ಎಸ್ಪಿ ಜಯಪ್ರಕಾಶ ತಿಳಿಸಿದ್ದಾರೆ.
ಘಟನೆಗೆ ಏನು ಕಾರಣ…?
ಯೋಧ ಕರಿಸಿದ್ದಪ್ಪ ಅವರು ಸೇನೆಗೆ ಸೇರಿ 8 ವರ್ಷಗಳು ಆಗಿವೆ. ಸದ್ಯ ರಾಜಸ್ತಾನದ 213 ರಾಕೆಟ್ ರೆಜಿಮೆಂಟ್ನಲ್ಲಿ ಸೇವೆಯಲ್ಲಿ ಇದ್ದರು. ಯೋಧ ಕರಿಸಿದ್ದಪ್ಪ ಕಳೆದ ನಾಲ್ಕು ವರ್ಷಗಳ ಹಿಂದೆ ತಮ್ಮದೇ ನೀರಲಕೇರಿ ಗ್ರಾಮದ ವಿದ್ಯಾಶ್ರೀಯನ್ನು ಪ್ರೀತಿಸಿ ಎರಡು ಕುಟುಂಬಗಳ ಸಮ್ಮುಖದಲ್ಲಿ ಮದುವೆ ಆಗಿದ್ದರು. ಆದರೆ, ಪ್ರೀತಿಸಿ ಮದುವೆಯಾಗಿದ್ದರೇನೋ ನಿಜ. ಆದರೆ, ಆರಂಭದ ಕೆಲ ದಿನ ಹೊರತುಪಡಿಸಿದರೆ ಪತಿ-ಪತ್ನಿ ನಡುವೆ ಹೊಂದಾಣಿಕೆ ಇರಲಿಲ್ಲ. ಯೋಧ ರಜೆಗೆ ಬಂದಾಗಲೆಲ್ಲ ಪತ್ನಿ ಕದನಕ್ಕೆ ಇಳಿಯುತ್ತಿದ್ದಳು. ಕರ್ತವ್ಯದಲ್ಲಿ ಇದ್ದಾಗಲೂ ಪೋನ್ ಮಾಡಿ ಜಗಳವಾಡುತ್ತಿದ್ದಳು. ತನ್ನ ಪತಿ ಬೇರೆಯವರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎನ್ನುವುದು ಪತ್ನಿ ವಿದ್ಯಾಶ್ರೀ ಗುಮಾನಿ. ಇದರಿಂದ ಜಗಳಗಳು ಆಗುತ್ತಿದ್ದವು. ಈ ಬಗ್ಗೆ ಒಂದು ಸಾರಿ
ಪೊಲೀಸ್ ಠಾಣೆಯಲ್ಲಿ ರಾಜೀ ಕೂಡ ಆಗಿತ್ತು.
ಇದೀಗ ರಜೆಗಾಗಿ ಕರಿಸಿದ್ದಪ್ಪ ಹತ್ತು ದಿನಗಳ ಹಿಂದೆ ಊರಿಗೆ ಬಂದಿದ್ದ. ಗುರುವಾರ ಗ್ರಾಮದಲ್ಲಿ ಅಮೋಘಸಿದ್ದೇಶ್ವರ ಜಾತ್ರೆ ನಡೆದಿತ್ತು. ಯೋಧ ತನ್ನ ಸ್ನೇಹಿತರ ಜೊತೆ ಜಾತ್ರೆ ಮುಗಿಸಿ ರಾತ್ರಿ ಊಟಕ್ಕೆಂದು ಮನೆಗೆ ಬಂದಿದ್ದ. ಹಾಗೆಯೇ ಯೋಧ ಊರಿಗೆ ಬಂದಿದ್ದರಿಂದ ಆತನ ಸಹೋದರಿ ಸಹ ರಾಖಿ ಕಟ್ಟಲು ಊರಿಗೆ ಬಂದಿದ್ದರು. ರಾತ್ರಿ ಎಲ್ಲರೂ ಊಟಕ್ಕೆ ಕುಳಿತಿದ್ದಾಗ ಪತ್ನಿ ಪೋನ್ ಚೆಕ್ ಮಾಡಿದ್ದಾಳೆ ಎನ್ನಲಾಗಿದೆ. ಆಗ ಪತಿ-ಪತ್ನಿ ಇಬ್ಬರ ನಡುವೆ ಜಗಳವಾಗಿದ್ದು, ಪತ್ನಿ ಮನೆಯಿಂದ ಹೊರಗೆ ಬಂದು ತನ್ನ ಸಹೋದರನಿಗೆ ವಿಷಯ ತಿಳಿಸಿದ್ದಾಳೆ. ಕೆಲವೇ ನಿಮಿಷಗಳಲ್ಲಿ ಯೋಧನ ಮನೆಯ ಕಡೆಗೆ ವಿದ್ಯಾಶ್ರೀ ಕುಟುಂಬದವರು ಬಂದಿದ್ದಾರೆ. ಸ್ವಲ್ಪ ಮುಂದೆ ಇದ್ದ ಧರಿಗೌಡ ಕೂಗಿದ್ದಾನೆ. ಇದರಿಂದ ಊಟದ ತಟ್ಟೆ ಬಿಟ್ಟು ಯೋಧ ಹೊರಗೆ ಬಂದಿದ್ದಾನೆ. ಅಷ್ಟರಲ್ಲಿ ಹಿಂದೆ ಮುಂದೆ ವಿಚಾರಿಸಿದೇ ನೇರವಾಗಿ ತಾನು ತಂದಿದ್ದ ಚಾಕುವಿನಿಂದ ಮೂರು ಕಡೆಗೆ ಇರಿದಿದ್ದಾನೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದು ಯೋಧ ಹೊರಳಾಡುತ್ತಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ನೆರೆಹೊರೆಯವರು ಯೋಧನನ್ನು ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಿದರಾದರೂ ದಾರಿಯಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.