ರಾಜ್ಯದ ಗಮನ ಸೆಳೆದಿದ್ದ ರವಿಕುಮಾರ್ ಚಾಮಲಾಪುರ

10M.D.R.1
Published on

ಮದ್ದೂರು: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ದಿ.ಸಿ.ಕೆ.ರವಿಕುಮಾರ್ ಚಾಮಲಾಪುರ ಅವರು ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.


ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ್ ಚಾಮಲಾಪುರ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ರವಿಕುಮಾರ್ ಅವರು ಕನ್ನಡ ಸಾಹಿತ್ಯ ಪರಿಷತ್‌ಗೆ ಎರಡನೇ ಬಾರಿ ಅಧ್ಯಕ್ಷರಾಗುವ ಮೂಲಕ ಪರಿಷತ್‌ನ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಿದರು. ಅಲ್ಲದೆ ಕನ್ನಡಕ್ಕಾಗಿ ಕೆಲಸ ಮಾಡಿದವರನ್ನು, ಪ್ರತಿಭಾವಂತ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪ್ರಗತಿಪರರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಮಾಡುವ ಮೂಲಕ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಿದ್ದರು ಎಂದರು.


ಸಾಹಿತ್ಯ ಪರಿಷತ್‌ನ ಬೆಳವಣಿಗೆಗೆ ಅವರ ಮನ ತುಡಿಯುತ್ತಿತ್ತು. ನಿತ್ಯ ಒಂದಲ್ಲ ಒಂದು ಕಾರ್ಯಕ್ರಮ ರೂಪಿಸಿ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿದ್ದರು. ಅಲ್ಲದೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮಂಡ್ಯಕ್ಕೆ ತರುವಲ್ಲಿ ಅವಿರತವಾಗಿ ಶ್ರಮ ವಹಿಸಿದ್ದರು ಎಂದು ಸ್ಮರಿಸಿದರು.


ನಿವೃತ್ತ ಪ್ರಾಧ್ಯಾಪಕ ಪ್ರೊಫೆಸರ್ ಬಿ.ಎಸ್.ಬೋರೇಗೌಡ ಮಾತನಾಡಿ, ಜಿಲ್ಲೆಯಲ್ಲಿ ರವಿಕುಮಾರ್ ಅವರ ಸಾಧನೆಯನ್ನು ಜೀವಂತವಾಗಿರಿಸಬೇಕು. ಅಲ್ಲದೆ ಯುವ ಸಾಹಿತಿಗಳು ಹಾಗೂ ಕನ್ನಡದ ಕಟ್ಟಾಳುಗಳು ರವಿಕುಮಾರ್ ಅವರ ಆಶಯಗಳನ್ನು ಮೈಗೂಢಿಸಿಕೊಳ್ಳಬೇಕು ಎಂದರು.


ಕಸಾಪ ಜಿಲ್ಲಾ ಉಪಾಧ್ಯಕ್ಷ ಬೋರೇಗೌಡ, ಸಂಘಟನಾ ಕಾರ್ಯದರ್ಶಿ ಸಿ.ಎಂ.ಕ್ರಾಂತಿ, ತಾಲೂಕು ಅಧ್ಯಕ್ಷ ವಿ.ಸಿ.ಉಮಾಶಂಕರ್, ಮಹಿಳಾ ಅಧ್ಯಕ್ಷೆ ಕರಡಗೆರೆ ಟಿ.ವಸಂತಾ, ಆತಗೂರು ಹೋಬಳಿ ಘಟಕದ ಅಧ್ಯಕ್ಷ ವೆಂಕಟೇಶ್, ಸಿ.ಎ.ಕೆರೆ ಹೋಬಳಿ ಘಟಕದ ಅಧ್ಯಕ್ಷ ಗಂಗಾಧರ್ ಸ್ವಾಮಿ, ಮುಖಂಡರಾದ ಸೀನಪ್ಪ ದೊಡ್ಡಿ ಶ್ರೀನಿವಾಸ್, ಎಂ.ವೀರಪ್ಪ, ನೀಲಮ್ಮ, ಬಿಂದುಶ್ರೀ, ವಿಜಯ, ಪ್ರಮೀಳಾ, ತಿಪ್ಪೂರು ಮನು, ಶ್ರೀನಿವಾಸ್, ಮಲ್ಲನಕುಪ್ಪೆ ರವಿ, ಪಟೇಲ್ ಹರೀಶ್, ಶಿವಲಿಂಗಯ್ಯ, ರಮೇಶ್ ರೈತ ಮುಖಂಡರಾದ ಸೊ.ಸಿ. ಪ್ರಕಾಶ್, ಪ್ರಭುಲಿಂಗ, ವೆಂಕಟೇಶ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net