ರಕ್ತದಾನದಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ

ರಕ್ತದಾನದಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ
Published on

ಹಾಸನ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಶಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಣಾವರ ಮತ್ತು ಯುವ ರೆಡ್ ಕ್ರಾಸ್ ಹಾಸನ ಘಟಕದ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಣಾವರದಲ್ಲಿ ರಕ್ತದಾನ ಶಿಬಿರ ಮತ್ತು ಬೃಹತ್ ಆರೋಗ್ಯ ತಪಾಸಣಾ ಶಿಬಿರ ಇತ್ತೀಚೆಗೆ ಆಯೋಜಿಸಲಾಗಿತ್ತು.

ರೆಡ್ ಕ್ರಾಸ್ ಸಂಸ್ಥೆಯ ಪ್ರಾಂತಪಾಲ ಹೆಮ್ಮಿಗೆ ಮೋಹನ್ ಶಿಬಿರ ಉದ್ಘಾಟಿಸಿ ಮಾತನಾಡಿ, ಆಸ್ಟ್ರೇಲಿಯಾದ ಜೇಮ್ಸ್ ಹ್ಯಾರಿಸನ್ ವಿಶ್ವದಲ್ಲಿಯೇ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರಾಗಿದ್ದಾರೆ. ಅವರು ತಮ್ಮ ಜೀವಿತಾವಧಿಯಲ್ಲಿ 1173 ಬಾರಿ ರಕ್ತದಾನ ಮಾಡಿದ್ದಾರೆ. ಭಾರತದಲ್ಲಿ ರಜತ್ ರೈಕಿ 222 ಬಾರಿ ರಕ್ತದಾನ ಮಾಡುವ ಮೂಲಕ ಅತಿ ಹೆಚ್ಚು ರಕ್ತದಾನ ಮಾಡಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.

ರಕ್ತದಾನವು ಹೃದಯ ಸಂಬಂಧಿ ಕಾಯಿಲೆ ಹಾಗೂ ಕ್ಯಾನ್ಸರ್‌ನಂತಹ ಅನೇಕ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ, ಜತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಿವರಿಸಿದರು.

ಪ್ರಾಂಶುಪಾಲ ದೊರೇಶ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಜಿಲ್ಲೆಯಾದ್ಯಂತ ಅನೇಕ ಉತ್ತಮ ಮಾನವೀಯ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಪ್ರೇರಣೆಯಾಗಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜನಪ್ರಿಯ ಆಸ್ಪತ್ರೆ ವತಿಯಿಂದ ಬಿಪಿ ತಪಾಸಣೆ ಮತ್ತು ಡಾ.ಫೈಜಲ್ (ಫಿಜಿಶಿಯನ್) ಅವರಿಂದ ವೈದ್ಯ ತಪಾಸಣೆ ಮತ್ತು ಸುನಂದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣೆ, ವಿ ಕೇರ್ ಆಸ್ಪತ್ರೆ ವತಿಯಿಂದ ದಂತ ತಪಾಸಣೆ ಹಾಗೂ ಜೀವಸಂಜೀವಿನಿ ರಕ್ತನಿಧಿ ಕೇಂದ್ರದ ವತಿಯಿಂದ ರಕ್ತಸಂಗ್ರಹ ಮಾಡಿದರು. ಶಿಬಿರದಲ್ಲಿ 20 ಜನ ರಕ್ತದಾನ ಮಾಡಿದರು ಹಾಗೂ 200ಕ್ಕೂ ಹೆಚ್ಚಿನ ಜನ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ್ದರು.

ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಶಬ್ಬೀರ್ ಅಹ್ಮದ್, ಜಯೇಂದ್ರಕುಮಾರ್, ಗಿರೀಶ್, ಭೀಮ್ ರಾಜ್, ಸಂಯೋಜಕ ಅವಿನಾಶ್, ಯುವ ರೆಡ್ ಕ್ರಾಸ್ ಘಟಕದ ಸಂಯೋಜಕ ಶಿವಶಂಕರ ಮೂರ್ತಿ ಇತರರಿದ್ದರು.

===

ಚಿತ್ರ: 3ಎಚ್‌ಎಸ್‌ಎನ್1: ಬಾಣಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ಮತ್ತು ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಹೆಮ್ಮಿಗೆ ಮೋಹನ್, ಪ್ರಾಂಶುಪಾಲ ದೊರೇಶ್, ಶಬ್ಬೀರ್ ಅಹ್ಮದ್, ಜಯೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net