ರಂಗೋಲಿ ಬಿಡಿಸಿ, ದೀಪ ಹಚ್ಚಿ ಸಂಭ್ರಮಾಚರಣೆ

KANNADA DEEPA
Published on

ಕಲಬುರಗಿ: ಕರ್ನಾಟಕ ನಾಮಕರಣ ಸುವರ್ಣಾ ಸಂಭ್ರಮದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತದ ಕರೆಗೆ ಓಗೊಟ್ಟು ಜಿಲ್ಲೆಯ ಜನ ಸರ್ಕಾರಿ ಕಚೇರಿ, ಶಾಲೆ, ಮನೆಗಳ ಮುಂದೆ ಬುಧವಾರ ಬೆಳಗ್ಗೆ ರಂಗೋಲಿ ಬಿಡಿಸಿ, ಸಂಜೆ ಕನ್ನಡ ಜ್ಯೋತಿಯ ಹಣತೆ ದೀಪ ಹಚ್ಚಿ ನಾಡ ಪ್ರೇಮ ಮೆರೆದರು.

ಜಿಲ್ಲಾಡಳಿತದ ಶಕ್ತಿ ಕೇಂದ್ರ ಕಲಬುರಗಿ ಮಿನಿ ವಿಧನಾಸೌಧ ಆವರಣ ಕಲರ್‌ಫುಲ್ ರಂಗೋಲಿಯಿಂದ ಕಂಗೊಳಿಸಿತು. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಘೋಷ ವಾಕ್ಯ ಹಳದಿ-ಕೆಂಪು ಬಣ್ಣದ ರಂಗೋಲಿಯಲ್ಲಿ ಬಿಡಿಸಲಾಗಿತ್ತು.

ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ಉಪನಿರ್ದೇಶಕರ ಕಚೇರಿಯ ಮುಂಭಾಗದ ಆವರಣ ರಂಗೋಲಿ ಮಯವಾಗಿತ್ತು. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ರಂಗೋಲಿಯಲ್ಲಿ ಬಿಡಿಸಿ ಕನ್ನಡ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಲಬುರಗಿ ನಗರದ ಮನಸ್ವಿನಿ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿಯೂ ಆಚರಿಸಲಾದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಗೆ ಪೂಜೆ, ಧ್ವಜಾರೋಹಣದ ಜತೆಗೆ ಶಾಲಾ ಆವರಣದಲ್ಲಿ ರಂಗೋಲಿ ಬಿಡಿಸಲಾಗಿತ್ತು. ಬುದ್ದಿ ಮಾಂದ್ಯ ಮಕ್ಕಳು ಸಂತಸದಿಂದ ಭಾಗಿಯಾಗಿದ್ದರು.

ಕಲಬುರಗಿ ಗುಬ್ಬಿ ಕಾಲನಿ ನಿವಾಸಿ ಡಾ.ರೇಣುಕಾ ಬಗಾಲೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಹಬ್ಬದ ರೀತಿಯಲ್ಲಿ ಮನೆಯ ಮುಂದೆ ದೀಪ ಹಚ್ಚಿ ಸಂಭ್ರಮಿಸಿದರು.

ಶಹಾಬಾದ ಪಟ್ಟಣದಲ್ಲಿಯೂ ಸರ್ಕಾರದ ಕರೆಗೆ ಓಗೊಟ್ಟು ಮನೆ ಮುಂದೆ ರಂಗೋಲಿಗಳ ಮಧ್ಯೆ ದೀಪ ಹಚ್ಚಿ ಕನ್ನಡಾಂಬೆಗೆ ಜ್ಯೋತಿ ಬೆಳಗಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net