ಯೋಜನಾ ಫಲಾನುಭವಿಗಳ ಮೌನಕ್ಕೆ ಆಕ್ರೋಶ

bkt-04-14-b
ಕೃಷ್ಣಾ ಸಂತ್ರಸ್ತರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಬುಧವಾರ ಹೋರಾಟ ಸಮಿತಿ ಗೌರವಾಧ್ಯಕ್ಷ ಅಜಯಕುಮಾರ ಸರನಾಯಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಚಿವ ಎಸ್.ಆರ್.ಪಾಟೀಲ, ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಕಾಂಗ್ರೆಸ್ ಮುಖಂಡ ಎಸ್.ಟಿ.ಪಾಟೀಲ, ಹನಮಂತ ಕೋರಡ್ಡಿ, ಎಂ.ಎಲ್.ಕೆಂಪಲಿಂಗಣ್ಣವರ ಮತ್ತಿತರರು ಇದ್ದರು
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ಕ್ಕೆ ಸಂಬಂಧ ಪಟ್ಟಂತೆ ಮುಳುಗಡೆ ಸಂತ್ರಸ್ತರು ಆರಂಭಿಸಿರುವ ಸರದಿ ಧರಣಿ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಕ್ಕೆ ನಿರೀಕ್ಷೆಗೆ ತಕ್ಕಂತೆ ಬೆಂಬಲ ನೀಡದ ನೀರಾವರಿ ಯೋಜನೆ ಫಲಾನುಭವಿ ಜಿಲ್ಲೆಗಳ ರೈತರು ಹಾಗೂ ಜನಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತವಾಗಿದೆ.

ಯೋಜನೆ ಪೂರ್ಣಗೊಂಡರೆ ಇದರಿಂದ ಮುಖ್ಯವಾಗಿ ಪಕ್ಕದ ವಿಜಯಪುರ ಜಿಲ್ಲೆಗೆ ೮೦ ಟಿಎಂಸಿ ನೀರು ಹಂಚಿಕೆಯಾಗಿ ಬ್ರಿಟಿಷರ ಕಾಲದಿಂದಲೂ ಬರದ ನಾಡು ಎನ್ನುವ ಹಣೆಪಟ್ಟಿ ಕಳಚಿಕೊಳ್ಳಲಿದೆ. ಹಾಗೆಯೇ ವಿಜಯಪುರ ಸೇರಿ ಏಳು ಜಿಲ್ಲೆಗಳ ರೈತರ ಬದುಕು ಬಂಗಾರ ಆಗುತ್ತದೆ. ಆದರೆ, ಯೋಜನೆಯನ್ನು ನಿರ್ಲಕ್ಷ್ಯದ ಕೂಪಕ್ಕೆ ತಳ್ಳಿರುವ ಸರ್ಕಾರದ ವಿರುದ್ಧ ಅವರದ್ದು ಧ್ವನಿಯೇ ಬರುತ್ತಿಲ್ಲ. ಯೋಜನೆಗಾಗಿ ಆಸ್ತಿ ಪಾಸ್ತಿ ಕಳೆದುಕೊಳ್ಳುವ ಬಾಗಲಕೋಟೆ ಜನರು ಸಂಕಷ್ಟಕ್ಕೆ ಸಿಲುಕು ಪರದಾಡುತ್ತಿದ್ದೇವೆ. ಹೀಗಾಗಿ ನಮ್ಮದು ಇದು ಕೊನೆ ಅಂತದ ಹಾಗೂ ತಾರ್ಕಿಕ ಅತ್ಯಂಕ್ಕೆ ತೆಗೆದುಕೊಂಡು ಹೋರಾಟ ಇದಾಗಿದೆ ಎಂದು ಸರ್ಕಾರ ಹಾಗೂ ಫಲಾನುಭವಿ ಜಿಲ್ಲೆಗಳ ಜನರ ವಿರುದ್ಧ ಮುಳುಗಡೆ ಸಂತ್ರಸ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಸರದಿ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ಗೌರವ ಅಧ್ಯಕ್ಷ ಅಜಯಕುಮಾರ ಸರನಾಯಕ, ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಮಾಜಿ ಸಚಿವ ಎಸ್.ಆರ್.ಪಾಟೀಲ ಅವರು, ಈ ಬಗ್ಗೆ ಖಾರವಾಗಿ ಮಾತನಾಡಿದ್ದಾರೆ.

ಸರನಾಯಕ ಮಾತನಾಡಿ, ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಸಿಎಂ ಹಾಗೂ ಡಿಸಿಎಂ ಹೇಳುತ್ತಾರೆ. ಚುನಾವಣೆ ಪೂರ್ವ ಇದೇ ಇಬ್ಬರು ವಿಜಯಪುರದಲ್ಲಿ ೬ನೇ ಗ್ಯಾರಂಟಿಯಾಗಿ ಘೋಷಿಸಿದ್ದ ನೀರಾವರಿ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಇಲ್ಲಿ ಪಕ್ಷ ಬರುವುದಿಲ್ಲ. ನಮಗೆ ಉತ್ತರ ಕರ್ನಾಟಕದ ಪ್ರಮುಖ ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ನಿಮಗೆ ಆದ್ಯತೆ ಆಗದೇ ಇದ್ದರೆ ನಮ್ಮ ಒತ್ತಾಯವೇನು ಇಲ್ಲ. ಆದರೆ, ಯೋಜನೆ ಮುಗಿಸಲು ನಮ್ಮಿಂದ ಆಗಲ್ಲ. ಹೀಗಾಗಿ ಯೋಜನೆ ರದ್ದು ಪಡಿಸುತ್ತೇವೆ ಎಂದು ಘೋಷಿಸಿ, ನಮ್ಮ ರೈತರ ಜಮೀನಿನ ಪಹಣಿಯಲ್ಲಿನ ಕೃಷ್ಣಾ ಮೇಲ್ದಂಡೆ ಯೋಜನೆ ಎನ್ನುವ ಹೆಸರು ತೆಗೆದುಬಿಡಿ ಎಂದು ನೇರವಾಗಿ ಹೇಳಿದರು.

ಮುಳುಗಡೆ ಸಂತ್ರಸ್ತರ ಸಹನೆ ಮೀರಿ ಹೋಗಿದೆ. ಸರ್ಕಾರದ ವಿಳಂಬ ನೀತಿಯಿಂದಾಗಿ ರೈತರ ಜಮೀನು ಮುಳುಗಡೆ ಆಗಿ ಪರಿಹಾರ ಸಿಗುತ್ತಿಲ್ಲ. ಮತ್ತೊಂದೆಡೆ ಜಮೀನು ಅಭಿವೃದ್ಧಿ ಪಡಿಸಲು ಆಗುತ್ತಿಲ್ಲ. ಅಽಸೂಚನೆ ಹೊರಡಿಸುವುದು, ವಿಳಂಬವಾಗಿ ಅಡು ವಿಸಿಯಟ್ ಆಗುವುದು ಮರ‍್ನಾಲ್ಕು ಸಲ ಆಗಿದೆ. ಇದು ಮುಳುಗಡೆ ಸಂತ್ರಸ್ತರಿಗೆ ದೊಡ್ಡ ತೊಳಲಾಟ ಆಗಿದೆ. ಸರ್ಕಾರ ಮೊದಲ ಹಂತದಲ್ಲಿ ೫೨೨ ಮೀಟರ್ ಹಾಗೂ ನಂತರದಲ್ಲಿ ೫೨೪ ಮೀಟರ್ ಗೆ ಜಲಾಶಯ ಎತ್ತರಿಸುವ ಯೋಜನೆ ಕೈಬಿಡಬೇಕು. ಒಂದೇ ಹಂತದಲ್ಲಿ ಯೋಜನೆ ಕೈಗೊಳ್ಳಬೇಕು. ಇಲ್ಲವಾದರೆ ಯೋಜನೆ ರದ್ದು ಪಡಿಸಬೇಕು ಎಂದು ಹಕ್ಕೋತ್ತಾಯ ಮಾಡಿದರು.

ಬೋಜಾ ಕೂಡಿಸಿ :

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ ಅನುಷ್ಠಾನವಾದರೆ ರಾಜ್ಯಕ್ಕೆ ೧೩೦ ಟಿಎಂಸಿ ನೀರು ದೊರೆತು ಇದರಿಂದ ೧೫ ಲಕ್ಷ ಎಕರೆ ಜಮೀನು ನೀರಾವರಿಗೆ ಒಳಪಡುತ್ತದೆ. ಯೋಜನೆ ಪೂರ್ಣಗೊಳ್ಳಲು ಅಂದಾಜು ೭೫ ಸಾವಿರದಿಂದ ೧ ಲಕ್ಷ ಕೋಟಿ ರೂ. ಬೇಕು. ಇದಕ್ಕೆ ಹಣಕಾಸು ಅಭಾವ ಎನ್ನುವ ಬದಲಿಗೆ ಫಲಾನುಭವಿ ರೈತರ ಪ್ರತಿ ಎಕರೆ ಜಮೀನಿನ ಮೇಲೆ ೫ ಸಾವಿರ ರೂ. ಬೋಜಾ ಕೂಡಿಸಿ ಬ್ಯಾಂಕಿನಿಂದ ಸಾಲ ಪಡೆದರೆ ೭೫ ಸಾವಿರ ಕೋಟಿ ರೂ. ಸಿಗುತ್ತದೆ. ಇದರಿಂದ ಸಂತ್ರಸ್ತರ ಜಮೀನು, ಕಟ್ಟಡ ಸ್ವಾಧೀನ ಪಡಿಸಿಕೊಂಡು ಪರಿಹಾರ ವಿತರಿಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net