ಯೋಗಿಯಂತೆ ಬುಲ್ಡೋಜರ್ ಆಡಳಿತ ನಡೆಸಿ

bkt-28-1
ವಿಪ ಮಾಜಿ ಸದಸ್ಯ, ಬಿಜೆಪಿ ಮುಖಂಡ ನಾರಾಯಣಸಾ ಭಾಂಡಗೆ
Published on

ಬಾಗಲಕೋಟೆ: ರಾಜ್ಯದಲ್ಲಿ ಹಿಂದು ಕಾರ್ಯಕರ್ತರನ್ನೇ ಹುಡುಕಿ ಹುಡುಕಿ ಕೊಲ್ಲುತ್ತಿದ್ದಾರೆ. ಆದರೂ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿದೆ. ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು. ಇಲ್ಲವೇ ಯೋಗಿ ಆಡಳಿತದಂತೆ ಅವರ ಮನೆಗಳ ಮೇಲೆ ಬುಲ್ಡೋಜರ್ ಹರಿಸಬೇಕು. ಅಲ್ಲಿಯವರೆಗೂ ಕೊಲೆಗಳು ನಿಲ್ಲುವುದಿಲ್ಲ ಎಂದು ವಿಪ ಮಾಜಿ ಸದಸ್ಯ, ಬಿಜೆಪಿ ಮುಖಂಡ ನಾರಾಯಣಸಾ ಭಾಂಡಗೆ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ರೀತಿಯಲ್ಲಿ ಕರ್ನಾಟಕ ಬುಲ್ಡೋಜರ್ ಆಡಳಿತ ಬೇಕಿದೆ. ಅಂದಾಗ ಹಿಂಸಾಕೃತ್ಯವೆಸಗುವ ಕೋಮುವಾದಿಗಳಿಗೆ ಹಾಗೂ ಭಯೋತ್ಪಾದಕರಿಗೆ ನಡುಕ ಹುಟ್ಟುತ್ತದೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಜೆಪಿ ಇತ್ತೀಚೆಗೆ ಹಿಂದುತ್ವದಿಂದ ಹಿಂದೆ ಸರಿಯುತ್ತಿದೆಯೇನೋ ಎಂಬ ಭಾವನೆ ಬರುತ್ತಿದೆ. ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಪಕ್ಷದ ನಾಯಕರಿಗೆ ನನ್ನ ಹೇಳಿಕೆಯಿಂದ ಮುಜುಗುರ ಉಂಟಾಗಬಹುದು. ಆದರೆ, ಸತ್ಯ ಹೇಳಬೇಕಿದೆ. ಸುದ್ದಿಗೋಷ್ಠಿ ಕರೆಯಲು ನಾಚಿಕೆ ಆಗುತ್ತಿದೆ ಎಂದರು.

ವಿಶ್ವಾಸ ಉಳಿಸಿಕೊಳ್ಳಿ:
ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರೂ ಬಳಿಕ ಏನೂ ಆಗಲಿಲ್ಲ. ಈಗ ಪ್ರವೀಣನ ಹತ್ಯೆಯಾಯಿತು. ಆದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದೇ ಸರ್ಕಾರ ಹೇಳಿದೆ. ಹಿಂದುತ್ವ ಹಾಗೂ ರಾಷ್ಟ್ರೀಯತೆ ಆಧಾರ ಮೇಲೆ ಬಿಜೆಪಿಯನ್ನು ಕಟ್ಟಿ ಬೆಳೆಸಲಾಗಿದೆ. ಕೇವಲ ಅಧಿಕಾರಕ್ಕಾಗಿ ಪಕ್ಷ ಕಟ್ಟಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ಬೆಳವಣಿಗೆ ಹಿಂದು ಹಾಗೂ ಬಿಜೆಪಿಯ ನೈಜ ಕಾರ್ಯಕರ್ತರಿಗೆ ಬೇಸರ ಉಂಟು ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೇಲೆ ನಾವೆಲ್ಲ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮುಖಂಡರಿಂದ ಆಗಬೇಕು ಎಂದರು.

ಕೆಲವು ಮಂತ್ರಿಗಳು, ಶಾಸಕರಿಗೆ ಹೋರಾಟ ಗೊತ್ತಿಲ್ಲ. ಪೊಲೀಸರ ಲಾಠಿ ಏಟು ತಿಂದಿಲ್ಲ. ನಾಡಿನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಕೊಲೆಗಳನ್ನು ನೋಡಿದರೆ ಕಣ್ಣಲ್ಲಿ ರಕ್ತ ಬರುತ್ತಿದೆ. ನೋವಿನಿಂದ ಮಾತನಾಡುತ್ತಿದ್ದೇನೆ. ವ್ಯವಸ್ಥಿತವಾಗಿ ಕೊಲೆ ನಡೆಯುತ್ತಿದ್ದರೂ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಶಾಸಕರಾಗಿ ಆಯ್ಕೆಯಾದವರು ತನ್ನ ಗೆಲುವಿನಲ್ಲಿ ಕಾರ್ಯಕರ್ತರ ಪರಿಶ್ರಮ ಇದೆ ಎನ್ನುವುದನ್ನು ಮರೆಯಬಾರದು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಪ್ರಯೋಜನವಿಲ್ಲ. 40 ವರ್ಷದಿಂದ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಜೈಲಿಗೆ ಹೋಗಿದ್ದೇನೆ. ಲಾಠಿ ಏಟು ತಿಂದಿದ್ದೇನೆ. ಅಮಾಯಕರ ಹತ್ಯೆ ಇನ್ನು ಘಟಿಸಬಾರದು ಎಂದರು.ಹಿಂದು ಎಂದು ಹೇಳಲು ಏಕೆ ನಾಚಿಕೆ ಪಡಬೇಕು? ಪ್ರಧಾನಿ, ರಾಷ್ಟ್ರಪತಿ, ಹಲವು ಮಂತ್ರಿಗಳು ಆರ್ ಎಸ್ ಎಸ್ ನಿಂದ ಬಂದವರೇ ಆಗಿದ್ದಾರೆ. ಬಿಜೆಪಿ ಹಿಂದುತ್ವದ ಪಕ್ಷವಾಗಿದೆ ಎಂದು ನಮ್ಮ ನಾಯಕರೇ ಹೇಳುತ್ತಾರೆ. ನಾವೂ ಸಹ ಹಿಂದುತ್ವದಿಂದಲೇ ಬಂದಿದ್ದೇವೆ. ಹೀಗಾಗಿ ಕೋಟ್ಯಾಂತರ ಕಾರ್ಯಕರ್ತರು ಬಿಜೆಪಿಯನ್ನು ಇಷ್ಟಪಡುತ್ತಾರೆ. ಆದರೆ, ಇಂದು ಹಿಂದು ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಾಗಿದೆ. ಸರ್ಕಾರ ತಕ್ಷಣವೇ ಕೊಲೆಗೆಡುಕರ ಹೆಡೆಮುರಿ ಕಟ್ಟಬೇಕು. ಪ್ರತಿಯೊಬ್ಬರೂ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಮುಂದಾಗಬೇಕಾದ ಸ್ಥಿತಿ ಬಂದಿದೆ ಎಂದು ನಾರಾಯಣಸಾ ಭಾಂಡಗೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net