

ಬಾಗಲಕೋಟೆ: ಯೋಗದ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕು. ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತವಾಗದೇ ಅದು ನಿರಂತರವಾಗಿ ನಡೆಯಬೇಕು ಎಂದು ವಿದ್ಯಾ ಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ ಹೇಳಿದರು.
ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ನಗರದ ವಿದ್ಯಾ ಪ್ರಸಾರಕ ಮಂಡಳದ ವಿವಿಧ ಅಂಗ ಸಂಸ್ಥೆಗಳು ಶುಕ್ರವಾರ ಸಕ್ರಿ ಹೈಸ್ಕೂಲ ಮೈದಾನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಉತ್ತಮ ಬದುಕಿಗೆ ಯೋಗ ಮಹತ್ವದಾಗಿದ್ದು ವಿದ್ಯಾರ್ಥಿಗಳು ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಯೋಗ ಶಿಬಿರಗಳ ಪ್ರಯೋಜನವನ್ನು ಪಡೆಯಬೇಕು ಎಂದರು.
ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಉಜ್ವಲ ಇತಿಹಾಸ,ಸಂಸ್ಕೃತಿ ಹಾಗೂ ಪರಂಪರೆ ನಮ್ಮ ದೇಶದ ಹೆಮ್ಮೆ. ಆಯುರ್ವೇದ, ಯೋಗ, ಧ್ಯಾನ ಇವುಗಳನ್ನು ಜಗತ್ತಿಗೆ ಪರಿಚಯಿಸಿದ ದೇಶ ನಮ್ಮದು. ಇದರ ಬಗ್ಗೆ ಯುವ ಸಮುದಾಯ ಅಭಿಮಾನವನ್ನು ಬೆಳೆಸಿಕೊಂಡು ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು.
ಚಂಚಲವಾದ ಮನಸ್ಸನ್ನು ನಿಯಂತ್ರಿಸುವದು ಅವಶ್ಯ. ಅದಕ್ಕೆ ಏಕಾಗ್ರತೆ ಬೇಕು. ಇದನ್ನು ಯೋಗದಿಂದ ಸಾಽಸಬಹುದು. ಮನಸ್ಸು ಮತ್ತು ದೇಹಕ್ಕೆ ಯೋಗ ಒಂದು ಉತ್ತಮ ವ್ಯಾಯಾಮ.ಇದನ್ನು ರೂಢಿಸಿಕೊಂಡಲ್ಲಿ ಉತ್ತಮ ಆರೋಗ್ಯವನ್ನು ಪಡೆದು ಜೀವನದಲ್ಲಿ ಯೋಗ್ಯ ಸಾಧನೆಯನ್ನು ಮಾಡಬಹುದು ಎಂದರು.
ವಿವಿಧ ಆಸನಗಳ ಪ್ರದರ್ಶನ…
ಕಾರ್ಯಕ್ರಮದಲ್ಲಿ ಬಸ್ತ್ರಿಕಾ ಪ್ರಾಣಾಯಾಮ, ಕಪಾಲಭಾತಿ,ಬಾಹ್ಯ,ಅನುಲೋಮ-ವಿಲೋಮ ಮತ್ತು ಬ್ರಾಹ್ಮರಿ ಪ್ರಾಣಾಯಾಮ ಸಹಿತ ಹಲವು ಆಸನಗಳನ್ನು ಪ್ರದರ್ಶಿಸಿದರು. ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಪತಂಜಲಿ ಯೋಗ ಪ್ರಶಿಕ್ಷಕ ಪ್ರಶಾಂತ ಗುಮಾಸ್ತೆ ಯೋಗಾಸನ ಮತ್ತು ಪ್ರಾಣಾಯಾಮದ ಪ್ರಾತ್ಯಕ್ಷಿಕೆ ನೀಡಿ ಆರೋಗ್ಯಪೂರ್ಣ ಜೀವನಕ್ಕೆ ಅವು ಹೇಗೆ ಸಹಕಾರಿಯಾಗಬಲ್ಲವು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರ ಅಧ್ಯಕ್ಷತೆ ವಹಿಸಿದ್ದರು. ಡಾ.ಉಮೇಶ ತಿಮ್ಮಾಪೂರ ನಿರೂಪಿಸಿದರು.ಪ್ರಾಚಾರ್ಯ ಅಶೋಕ ಕಂದಗಲ್ ವಂದಿಸಿದರು. ಉಪಾಧ್ಯಕ್ಷ ಜಿ.ಎನ್.ಕುಲಕರ್ಣಿ,ಸದಸ್ಯ ಡಾ.ಪಿ.ಆರ್.ಜೋಶಿ,ಉಪ ಪ್ರಾಚಾರ್ಯ ಬಿ.ಎಚ್.ಲಮಾಣಿ ಇದ್ದರು.