

ಬಾಗಲಕೋಟೆ: ಗಿನ್ನೀಸ್ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ಜ.15 ರಂದು ಬೆಳಗ್ಗೆ 6 ಗಂಟೆಯಿಂದ ಜರುಗಲಿರುವ ಯೋಗಾಥಾನ್ ಕಾರ್ಯಕ್ರಮಕ್ಕೆ ಕೋಟೆನಗರಿ ಸಜ್ಜುಗೊಂಡಿದೆ. ಬಿವಿವಿ ಸಂಘದ ಹಳೇ ಮೈದಾನದಲ್ಲಿ ಜಿಲ್ಲಾಡಳಿತದಿಂದ ಸಜ್ಜಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ನಗರದ ಬಿವಿವಿ ಸಂಘದ ಹಳೇ ಮೈದಾನದಲ್ಲಿ ಶನಿವಾರ ಯೋಗಾಥಾನ್ ಕಾರ್ಯಕ್ರಮದ ಸಿದ್ದತೆ ಕುರಿತು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬೆಳಿಗ್ಗೆ 6 ರಿಂದ 7.30 ವರೆಗೆ ಪ್ರವೇಶದ್ವಾರದಲ್ಲಿ ಕ್ಯೂಆರ್ ಕೋಡನೊಂದಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. 7.30 ರಿಂದ 8 ವರೆಗೆ ನಿಗದಿಪಡಿಸಿದ ಸ್ಥಳಕ್ಕೆ ಯೋಗಪಟುಗಳನ್ನು ಸಜ್ಜುಗೊಳಿಸುವ ಕಾರ್ಯ ನಡೆಯಲಿದೆ. ಬೆಳಗ್ಗೆ 7.45ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಆಗಮಿಸಲಿದ್ದಾರೆ. ನಾಡಗೀತೆ, ಜಿಲ್ಲಾಧಿಕಾರಿಗಳಿಂದ ಸ್ವಾಗತ ಭಾಷಣ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮ ಉದ್ಘಾಟಿಸಿ ನಂತರ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೀರಣ್ಣ ಚರಂತಿಮಠ ವಹಿಸಲಿದ್ದಾರೆ ಎಂದರು.
ಬೆಳಿಗ್ಗೆ 8.13 ರಿಂದ 9.03 ವರೆಗೆ 41 ನಿಮಿಷಗಳ ಪ್ರೋಟೋಕಾಲ್ ಪ್ರಕಾರ ಸಾಮೂಹಿಕ ಯೋಗ ನಡೆಯಲಿದೆ. ಯೋಗಾಥಾನ್‍ದಲ್ಲಿ ಉತ್ತಮ ಯೋಗ ಪ್ರದರ್ಶಿಸಿದ ಜಿಲ್ಲೆಯ ಅತ್ಯುತ್ತಮ ಶಾಲೆ ಮತ್ತು ಕಾಲೇಜುಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಯೋಗಾಥಾನ್ ಕಾರ್ಯಕ್ರಮಕ್ಕೆ 15 ಸಾವಿರ ಗುರಿ ಇದ್ದು, 20 ಸಾವಿರಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಒಂದು ಮುಖ್ಯ ವೇದಿಕೆ ಹಾಗೂ 20 ಮಿನಿ ವೇದಿಕೆಗಳನ್ನು ಹಾಕಲಾಗಿದೆ. ಪತಂಜಲಿ ಯೋಗ ಸಂಸ್ಥೆಯಿಂದ 84 ಯೋಗ ಬೋಧಕರನ್ನು ಆಯೋಜಿಸಲಾಗಿದೆ. ಯೋಗಪಟು ಮತ್ತು ವಿದ್ಯಾರ್ಥಿಗಳಿಗೆ ಯೋಗಾ ಮ್ಯಾಟ್ ನೀಡುವದಿಲ್ಲ. ಎಲ್ಲರೂ ತಮ್ಮದೇ ಮ್ಯಾಟ್ ತರುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಲು ಸೂಚಿಸಲಾಗಿದೆ. ಎನ್‍ಸಿಸಿ ಕೆಡೆಟ್ಸ್‍ಗಳನ್ನು ಸ್ಟೀವಡ್ರ್ಸ ಕರ್ತವ್ಯಕ್ಕಾಗಿ ತರಬೇತಿ ನೀಡಲಾಗಿದೆ. ಕಾರ್ಯಕ್ರಮದ ಮುಖ್ಯ ದ್ವಾರದಲ್ಲಿ ಯೋಗಪಟುಗಳ ಕ್ಯೂಆರ್ ಕೋಡ್ ಸ್ಯಾನಿಂಗ್‍ಗಾಗಿ 25 ಕೌಂಟರ್‍ಗಳನ್ನು ತೆರೆಯಲಾಗಿದೆ. ಮೈದಾನದಲ್ಲಿ ಸಿಸಿಟಿವಿ ಸಹ ಅಳವಡಿಸಲಾಗಿದ್ದು, 500 ಜನಕ್ಕೆ ಒಂದು ಬ್ಲಾಕ್ ಮಾಡಲಾಗಿದೆ ಎಂದರು.
ಮೈದಾನದಲ್ಲಿ ಹೊದಿಕೆ ಹಾಕಲಾಗಿದ್ದು, ಬ್ಯಾರಿಕೇಡ್, ಮಾರ್ಕಿಂಗ್, ಧ್ವನಿ ವರ್ಧಕ ಅಳವಡಿಸಲಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಮೈದಾನಕ್ಕೆ ಸಮಯಕ್ಕೆ ಸರಿಯಾಗಿ ಕರೆತರುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸೂಚಿಸಲಾಗಿದೆ. ತಾತ್ಕಾಲಿಕ ಶೌಚಾಲಯ, ಭಾಗವಹಿಸಿದ ಯೋಗಪಟುಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಎನ್.ಐ.ಸಿಯ ಗಿರಿಯಾಚಾರ, ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.