

ಕೊಳ್ಳೇಗಾಲ: ನಾಡಿನೆಲ್ಲಡೆ ರಥಸಪ್ತಮಿ ಆಚರಣೆ ಸಂಭ್ರಮ ಮಂಗಳ ವಾರ ನಡೆದಿದ್ದು, ಪಟ್ಟಣದ ಪತಂಜಲಿ ಯೋಗ ಸಮಿತಿ ಯೋಗ ಪಟುಗಳು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಖಂಡ ಸೂರ್ಯ ನಮಸ್ಕಾರ ನೆರವೇರಿಸಿದರು.
ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈ ದಾನದಲ್ಲಿ ಸಮಾವೇಶಗೊಂಡ ಪತಂಜಲಿ ಯೋಗ ಸಮಿತಿಯ ಯೋಗ ಪಟುಗಳು ಹಾಗೂ ಮಾತೆಯರು ಮುಂಜಾನೆ 5.30ರಂದು ಸೂರ್ಯ ನಮಸ್ಕಾರ ಮಾಡಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯ ಗೌರವಾಧ್ಯಕ್ಷ ರಾದ ಪಶುಪತಿ, ನಟರಾಜು ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಮಂಜುನಾಥ್, ಯೋಗ ಶಿಕ್ಷಕಿ ಜ್ಯೋತಿ ಅವರು ಉಪಸ್ಥಿತರಿದ್ದರು
7 ಗಂಟೆಯವರೆಗೂ ಅಖಂಡ ಸೂರ್ಯ ನಮಸ್ಕಾರ ಪ್ರದರ್ಶಿಸಿದ ಯೋಗಪಟುಗಳು ನಂತರ ಮಹದೇಶ್ವರ ಕಾ ಲೇಜು ಸಮೀಪವಿರುವ ಪತಂಜಲಿ ಯೋಗ ತರಬೇತಿ ಸಭಾಂಗಣದಲ್ಲಿ ಸೂರ್ಯ ನಮಸ್ಕಾರ ಮುಂದುವರಿಸಿದರು. ಸುಮಾರು 40 ಮಾತೆಯರು ಸೂರ್ಯ ನಮಸ್ಕಾರವನ್ನು ಸಂಜೆ 6 ಗಂಟೆಯ ವರೆವಿಗೂ ನಿರಂತರವಾಗಿ ಮಾಡಿದರು.
ಬಳಿಕ 6.30ರಲ್ಲಿ ಪತಂಜಲಿ ಮಹರ್ಷಿಗಳಿಗೆ ವಿಶೇಷವಾಗಿ ಸಮಿತಿ ಸದಸ್ಯರು ಪೂಜೆ ಸಲ್ಲಿಸಿ ಭಕ್ತಿ ಮೆರೆದರು. ಬಳಿಕ ಪೂಜೆಯಲ್ಲಿ ಪಾಲ್ಗೊಂಡಿದ್ದವರಿಗೆ ಗೋಧಿ ಪಾಯಸ ಪ್ರಸಾದ ವಿತರಿಸಲಾಯಿತು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಸನಾತನ ಧರ್ಮದಲ್ಲಿ ರಥಸಪ್ತಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನಂಬಿಕೆಗಳ ಪ್ರಕಾರ ಈ ದಿನದಂದು ಸೂರ್ಯನ ಏಳು ಕುದುರೆಗಳು ಅವನ ರಥವನ್ನು ಎಳೆಯಲು ಆರಂಭಿಸುತ್ತವೆ. ಇಡೀ ಲೋಕಕ್ಕೆ ಬೆಳಕು ನೀಡುವ ಸೂರ್ಯನಿಗೆ ಅಖಂಡ ಸೂರ್ಯ ನಮಸ್ಕಾರ ಮಾಡುವುದು ವಿಶೇಷವಾಗಿದೆ. ಅಂತೆಯೇ, ಯೋಗಪಟುಗಳು ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ನಿರಾಯಾಸವಾಗಿ ಸೂರ್ಯ ನಮಸ್ಕಾರ ಮಾಡಿದ್ದಾರೆ ಎಂದರು.
11.992 ಸೂರ್ಯ ನಮಸ್ಕಾರ: ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗ ಪಟುಗಳು ದಿನವಿಡೀ ಸೂರ್ಯ ನಮಸ್ಕಾರ ನೇರವೇರಿಸಿದ್ದು ರಥಸಪ್ತಮಿಯ ವಿಶೇಷವಾಗಿತ್ತು. ಒಟ್ಟು 11.992 ಸೂರ್ಯ ನಮಸ್ಕಾರವನ್ನು ಒಟ್ಟು ಸಮಿತಿಯ ಸದಸ್ಯರು ಮಾಡಿದರು.