

ಬಾಗಲಕೋಟೆ: ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮಹತ್ವದ ಪಾತ್ರವನ್ನು ಹೊಂದಿದ್ದು, ಪ್ರತಿಯೊಬ್ಬರು ನಿತ್ಯ ಯೋಗ ಮಾಡಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಎ.ಎನ್.ಎಂ ತರಬೇತಿ ಕೇಂದ್ರದಲ್ಲಿ ಆಯುಷ್ಯ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೯ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಯೋಗ ತರಬೇತಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಗದಿಂದ ಅನೇಕ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ. ನಮ್ಮ ಋಷಿಮುನಿಗಳು ಪ್ರಚೂರ ಪಡಿಸಿದ ಯೋಗ ಮುಂದಿನ ಪೀಳಿಗೆ ಜನರಿಗೆ ಪರಿಚಯಿಸುವ ಕೆಲಸ ನಮ್ಮೆಲ್ಲರ ಮೇಲಿದೆ ಎಂದರು.
ಜಿಲ್ಲಾ ಆಯುಷ್ಯ ಅಧಿಕಾರಿ ಡಾ.ಅಕ್ಕಮಹಾದೇವಿ ಗಾಣಿಗೇರ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಜೂ.೨೧ ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ಮನೆ ಅಂಗಳದಲ್ಲಿ ಯೋಗ, ವಸುದೈವ ಕುಟುಂಬಕಮ್ ಘೋಷ ವ್ಯಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮನಸ್ಸು, ಶರೀರ, ಆತ್ಮ ಒಂದು ಗೂಡಿಸಿದರೆ ಯೋಗ. ದಿನನಿತ್ಯ ಯೋಗ ಮಾಡುವುದರಿಂದ ನಮ್ಮ ಶರೀರದಲ್ಲಿಯ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ಯಾವುದೇ ರೋಗಗಳು ಬರುವದಿಲ್ಲ ಎಂದು ತಿಳಿಸಿದರು.
ಎ.ಎನ್.ಎಂ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸುಮಿತ್ರಾ ದಿಡಗೂರ ಮಾತನಾಡಿ, ನಿದ್ರೆ ಮತು ಸತ್ವಯುತ ಆಹಾರ ಸೇವನೆ, ವ್ಯಾಯಾಮ ಧ್ಯಾನ ವಿಹಾರ ದಿನನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಾವುದೇ ರೋಗಗಳು ಬರುವದಿಲ್ಲ. ಈಗಿನ ಕಲಿಯುಗದಲ್ಲಿ ದುಡ್ಡು ಹೆಚ್ಚಿಗೆ ಮಾಡುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ವಿನಹಃ ಜ್ಞಾನ ಆರೋಗ್ಯ ಹೆಚ್ಚಿಸಿಕೊಳ್ಳುವುದರಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಆರೋಗ್ಯವನ್ನು ಕೊಂಡುಕೊಳ್ಳುವ ವಸ್ತುವಲ್ಲ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ವಿನೋದ ಪಾಗದ, ಎ.ಎನ್.ಎಂ ತರಬೇತಿ ಕೇಂದ್ರದ ಬೋಧಕ ಬಿ.ಎಂ.ಚಿತ್ರಗಾರ, ಹಿರಿಯ ವೈದ್ಯಾಽಕಾರಿ ಡಾ.ಸಿ.ಪಿ.ರಕ್ಕಸಗಿ, ಡಾ.ಎಂ.ಬಿ.ಬೇವೂರ, ಡಾ.ಕವಿತಾ ಅಮಾಸಿ, ಡಾ.ಷಣ್ಮುಖ ಕಾಪ್ಸೆ, ಡಾ.ಎಂ.ಬಿ.ಬೇವೂರ ಸೇರಿದಂತೆ ಇತರರು ಉಪಸ್ಥಿತರಿದ್ದರು. ತರಬೇತಿಯಲ್ಲಿ ೩೦ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಲಾಯಿತು.