

ಹಳೇಬೀಡು: ಇಲ್ಲಿನ ಐತಿಹಾಸಿಕ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಜೂ.21ರಂದು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕ ಎಚ್.ಕೆ. ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯ ಪರಿಶೀಲಿಸಿದರು.
ಕೇಂದ್ರ ಪುರಾತತ್ವ ವಿಭಾಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಭಾಗವಹಿಸಲಿದ್ದಾರೆ. ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ.ಸುರೇಶ್, ಕೇಂದ್ರ ಪುರಾತತ್ವ ವಿಭಾಗದ ಉನ್ನತ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವು ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದ್ದು 300ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸಲಿದ್ದಾರೆ.
ಕೇಂದ್ರ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅದಕ್ಕೂ ಮೊದಲು ಹೊಯ್ಸಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ದೇಗುಲ ಆವರಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಯೋಗಾಭ್ಯಾಸ ನಡೆಸಲಿದ್ದಾರೆ. ಹೊಯ್ಸಳೇಶ್ವರ ದೇವಾಲಯದಂತಹ ಐತಿಹಾಸಿಕ ಸ್ಥಳದಲ್ಲಿ ಯೋಗ ದಿನ ಆಯೋಜಿಸುವುದರಿಂದ ಸ್ಥಳೀಯ ಸಂಸ್ಕೃತಿಯ ಜತೆಗೆ ಯೋಗದ ಸಂದೇಶವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಸಹಾಯವಾಗಲಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುಕುಮಾರ್, ತಹಸೀಲ್ದಾರ್ ಎಂ.ಮಮತಾ, ಪುರಾತತ್ವ ವಿಭಾಗದ ಸ್ಮಾರಕ ಅಧಿಕಾರಿ ಸುನೀಲ್, ಚಂದನ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.