

ಮುಂಡಗೋಡ: ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಯೂರಿಯಾ ಗೊಬ್ಬರ ಸಮರ್ಪಕವಾಗಿ ಸಿಗದೇ ರೈತರು ಪರದಾಡುವಂತಾಗಿದೆ. ಸದ್ಯ ಭತ್ತ, ಗೋವಿನ ಜೋಳ, ಬಾಳೆ, ಅಡಕೆ, ಕಬ್ಬು, ಹತ್ತಿ ಬೆಳೆಗಳಿಗೆ ಯೂರಿಯಾ ಗೊಬ್ಬರದ ತೀವ್ರ ಅವಶ್ಯಕತೆ ಇದೆ.
ಗ್ರಾಮೀಣ ಭಾಗದ ಸೊಸೈಟಿಗಳಲ್ಲಿ ಯೂರಿಯಾ ಗೊಬ್ಬರ ಇಲ್ಲದ್ದರಿಂದ ರೈತರು ಪಟ್ಟಣದ ಎಲ್ಎಸ್ಎಂಪಿ ಸೊಸೈಟಿ ಮತ್ತು ಇತರ ಖಾಸಗಿ ಆಗ್ರೋ ಕೇಂದ್ರಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬರುತ್ತಿದೆ. ಪಟ್ಟಣದ ಎಲ್ಎಸ್ಎಂಪಿ ಸೊಸೈಟಿಯಲ್ಲಿ ದಾಸ್ತಾನಿದ್ದ ಎಲ್ಲ ಯೂರಿಯಾ ಗೊಬ್ಬರವನ್ನು ರೈತರಿಗೆ ವಿತರಿಸಲಾಗಿದ್ದು, ಸೋಮವಾರ ಮಧ್ಯಾಹ್ನದ ಹೊತ್ತಿಗೆ ಖಾಲಿಯಾಗಿದೆ. ಇದರಿಂದಾಗಿ ಕೆಲ ರೈತರು ಬರಿಗೈಯಲ್ಲಿ ಮರಳಿದರು.
ವಿಷಯ ತಿಳಿದ ತಹಸೀಲ್ದಾರ್ ಶ್ರೀಧರ ಮುಂದಲಮನಿ ಎಲ್ಎಸ್ಎಂಪಿ ಸೊಸೈಟಿಗೆ ಭೇಟಿ ನೀಡಿ ರೈತರನ್ನು ಸಮಾಧಾನಪಡಿಸಿದರು. ಈ ವೇಳೆ ಎಲ್ಎಸ್ಎಂಪಿ ವ್ಯವಸ್ಥಾಪಕ ಕೆ. ಪುಷ್ಪಾಂಗದನ್ ಮಾತನಾಡಿ, 50 ಟನ್ ಯೂರಿಯಾ ಗೊಬ್ಬರಕ್ಕೆ ನಾವು ಬೇಡಿಕೆ ಸಲ್ಲಿಸಿದ್ದೇವು. ಆದರೆ, 15 ಟನ್ ಸರಬರಾಜಾಗಿದ್ದು, ಅದನ್ನು ರೈತರಿಗೆ ಹಂಚಿದ್ದೇವೆ ಎಂದರು.
ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಹಂತ- ಹಂತವಾಗಿ ಸರಬರಾಜು ಮಾಡುವಂತೆ ವಿತರಕರಿಗೆ ಸೂಚಿಸಲಾಗಿದೆ. ಖಾಸಗಿ ಆಗ್ರೋ ಕೇಂದ್ರಗಳಲ್ಲಿ ಯೂರಿಯಾ ಜತೆಗೆ ಲಿಂಕ್ ಪ್ರೊಡಕ್ಟ್ ನೀಡುತ್ತಿದ್ದು, ರೈತರ ಮನವೊಲಿಸಿ ಕೊಡುವಂತೆ ಲಿಖಿತವಾಗಿ ತಿಳಿಸಲಾಗಿದೆ. | ಎಂ.ಎಸ್. ಕುಲಕರ್ಣಿ ಸಹಾಯಕ ಕೃಷಿ ನಿರ್ದೇಶಕ