

ಕಾರವಾರ/ಭಟ್ಕಳ: ಉತ್ತರ ಕನ್ನಡಕ್ಕೆ ಮತ್ತೆ ಕರೊನಾಘಾತ ಉಂಟಾಗಿದೆ. ಭಟ್ಕಳ ಮೂಲದ 18 ವರ್ಷದ ಯುವತಿಗೆ ಕೋವಿಡ್-19 ಸೋಂಕು ಖಚಿತವಾಗಿದ್ದು, ಇನ್ನೂ ಕೆಲವರಿಗೆ ಸೋಂಕು ತಗುಲುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಮಾ. 22ರಂದು ಭಟ್ಕಳದಲ್ಲಿ ಮೊದಲ ಕರೊನಾ ಪ್ರಕರಣ ಕಾಣಿಸಿಕೊಂಡಿತ್ತು. ಏ. 14ಕ್ಕೆ ಕೊನೆಯ ಕರೊನಾ ಪ್ರಕರಣ ಕಾಣಿಸಿತ್ತು. ಜಿಲ್ಲೆಯ ವೈದ್ಯರ ತಂಡ ಎಲ್ಲರಿಗೂ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿತ್ತು. ಅಧಿಕಾರಿಗಳ, ವೈದ್ಯರ ಶ್ರಮದಿಂದ ಜಿಲ್ಲೆಯ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈ ಸಮಾಧಾನ ಬಹುದಿನ ಉಳಿದುಕೊಂಡಿಲ್ಲ. ಕರೊನಾ ಮುಕ್ತವಾಗಿ ಹಸಿರು ವಲಯದತ್ತ ತೆರಳುವ ಜಿಲ್ಲೆಯ ಜನರ, ಅಧಿಕಾರಿಗಳ ಕನಸು ಹುಸಿಯಾಗಿದೆ.
ಆಸ್ಪತ್ರೆಯಿಂದ ಬಂದಿತೆ?: ಮಂಗಳೂರಿನ ಪಡೀಲ್ನಲ್ಲಿರುವ ಕರೊನಾ ರೋಗಿಗಳಿಗೆ ಚಿಕಿತ್ಸೆಗೆ ನೀಡುತ್ತಿರುವ ಫಸ್ಟ್ ನ್ಯೂರೋ ಆಸ್ಪತ್ರೆಗೆ ಸೋಂಕಿತೆಯ ಕುಟುಂಬದವರು ಹೋಗಿ ಬಂದಿದ್ದರು. ಅಲ್ಲಿಂದಲೇ ರೋಗ ಹರಡಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಸೋಂಕಿತೆ ಹೊರಗೆಲ್ಲೂ ಓಡಾಡಿಲ್ಲ. ಈಕೆಯ ಅಕ್ಕ ಹಾಗೂ ಭಾವ ಅವರ ಚಿಕ್ಕ ಮಗುವನ್ನು ಜಿಲ್ಲಾಡಳಿತದ ಅನುಮತಿ ಪಡೆದು ಏ. 19ರಂದು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಂದು ರಾತ್ರಿ ಮಂಗಳೂರಿನ ಸಂಬಂಧಿಕರ ಮನೆಯಲ್ಲಿ ಉಳಿದ ಮೂವರು ಏ. 20ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನದ 1 ಗಂಟೆಯವರೆಗೆ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಿ ವಾಪಸಾಗಿದ್ದರು.
ಸೋಂಕಿತೆ ಮನೆಯಲ್ಲಿ, 80 ವರ್ಷದ ವೃದ್ಧ, ಚಿಕ್ಕ ಮಗು ಸೇರಿ 10 ಜನರು ಸಂಪರ್ಕದಲ್ಲಿದ್ದಾರೆ. ಎಲ್ಲರ ಗಂಟಲಿನ ದ್ರವ ತೆಗೆದು ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಲಾಗಿದೆ. ಒಂದೆರಡು ದಿನದಲ್ಲಿ ವರದಿ ಬರುವ ಸಾಧ್ಯತೆ ಇದೆ. ಎಲ್ಲರನ್ನೂ ಪ್ರತ್ಯೇಕಿಸಿ ಇರಿಸಲಾಗಿದೆ. ಇನ್ನು ಸೋಂಕಿತೆ ಜತೆಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ 25 ಜನರನ್ನು ಗುರುತಿಸಲಾಗಿದ್ದು, ಇನ್ನಷ್ಟು ಜನರನ್ನು ಗುರುತಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ನಡೆಸುತ್ತಿದೆ. ಸೋಂಕಿತೆಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಗ್ಯ ಸಮೀಕ್ಷೆಯಿಂದ ಗೊತ್ತಾಯ್ತು: ಆಶಾ ಕಾರ್ಯಕರ್ತೆಯರು ಜಿಲ್ಲೆಯೆಲ್ಲೆಡೆ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯುವತಿಯಲ್ಲಿ ಜ್ವರ, ಕೆಮ್ಮು ಮುಂತಾದ ಲಕ್ಷಣಗಳಿದ್ದವು. ಇದರಿಂದ ಕ್ವಾರಂಟೈನ್ ಮಾಡಿ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಕರೊನಾ ಇರುವುದು ಖಚಿತವಾಗಿದೆ. ಸದ್ಯ ಆಶಾ ಕಾರ್ಯಕರ್ತೆಯರಿಂದ ಮತ್ತೊಂದು ಆರೋಗ್ಯ ಸಮೀಕ್ಷೆ ಮುಗಿದಿದೆ. ಮತದಾರರ ಪಟ್ಟಿ ಆಧರಿಸಿ ಮತದಾರ ಅಧಿಕಾರಿಗಳಿಂದ ನಡೆಸುವ ಸಮೀಕ್ಷೆಯನ್ನು ಇನ್ನಷ್ಟು ನಿಖರವಾಗಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.
ಭಟ್ಕಳ ಕಂಟೈನ್ಮೆಂಟ್ ವಲಯ: ಭಟ್ಕಳ, ಜಾಲಿ ಪಟ್ಟಣ ಹಾಗೂ ಎಲ್ಲ ಗ್ರಾಪಂ ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಆದೇಶ ಹೊರಡಿಸಿದ್ದಾರೆ. ಇಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಯಾವುದೇ ಅಂಗಡಿ ತೆರೆಯುವುದು, ಓಡಾಟ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಭಟ್ಕಳಕ್ಕೆ ಯಾರೂ ತೆರಳುವುದು ಹಾಗೂ ಬರುವುದನ್ನೂ ನಿಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಿಯಮ ಉಲ್ಲಂಘಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಆಸ್ಪತ್ರೆಗೂ ಹೊರ ಜಿಲ್ಲೆಗೆ ತೆರಳುವಂತಿಲ್ಲ: ಆರೋಗ್ಯ ತುರ್ತು ಚಿಕಿತ್ಸೆಗಾಗಿ ತೆರಳಿದವರ ಕುಟುಂಬದಲ್ಲಿ ಕರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಇನ್ನು ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತುರ್ತು ಆರೋಗ್ಯ ಸೇವೆಗಳಿಗಾಗಿ ಅನುಮತಿ ಪಡೆದು ತೆರಳುವುದನ್ನು ಆದಷ್ಟು ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ತಿಳಿಸಿದ್ದಾರೆ. ಜಿಲ್ಲೆಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಸರ್ಕಾರಿ ಆಪ್, ವೆಬ್ಸೈಟ್ಗಳಿಂದ ಗೊಂದಲ: ಆರೋಗ್ಯ ಸಿಂಧು ಆಪ್ನಲ್ಲಿ ಭಟ್ಕಳದಲ್ಲಿ ಮೂವರು ಸೋಂಕಿತರಿದ್ದಾರೆ ಎಂದು ತೋರಿಸಲಾಗುತ್ತಿದೆ. ಇನ್ನು, ರಾಜ್ಯ ಸರ್ಕಾರ ಮಂಗಳವಾರ ಬೆಳಗ್ಗೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ಭಟ್ಕಳದ 28 ವರ್ಷದ ಪುರುಷನಿಗೆ ಸೋಂಕಿದೆ ಎಂದು ತಪ್ಪು ವಿವರ ಪ್ರಕಟವಾಗಿತ್ತು. ಈ ಕುರಿತು ಜಿಲ್ಲಾಧಿಕಾರಿ ವಿಷಾದ ವ್ಯಕ್ತಪಡಿಸಿದ್ದು, ಸರಿಪಡಿಸಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.