

ಎನ್.ಆರ್.ಪುರ: ಹದಿಹರೆಯದ ವಯಸ್ಸಿನಲ್ಲಿ ಯುವಜನರು ದಾರಿತಪ್ಪುವ ಸಂಭವವಿದ್ದು ಹೀಗಾಗಿ ಪಾಲಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬಾಲಕೃಷ್ಣ ಭಟ್ ಸಲಹೆ ನೀಡಿದರು.
ಅವರು ಶುಕ್ರವಾರ ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪದಡಿ ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರೊನಾ ಸಂದರ್ಭದಲ್ಲಿ ಬೆಂಗಳೂರು ಹಾಗೂ ದೊಡ್ಡ ನಗರದ ಯುವಜನರು ಗ್ರಾಮೀಣ ಪ್ರದೇಶಕ್ಕೆ ವಲಸೆ ಬರುವಾಗ ದುಶ್ಚಟಗಳನ್ನು ತಂದಿದ್ದಾರೆ. ವೈದ್ಯರ ಮಾಹಿತಿ ಪ್ರಕಾರ ಡ್ರಗ್ಸ್ ಸೇವಿಸಿ ಚಿಕಿತ್ಸೆಗೆ ಆಸ್ಪತ್ರೆಗೆ ಬರುವುವರಲ್ಲಿ ಶೇ. 20ರಷ್ಟು ಮಕ್ಕಳು ಇದ್ದಾರೆ. ಇದನ್ನು ಮನಗಂಡ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಡೆ ಅವರು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಡಿ ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಅನೇಕ ಸಂದರ್ಭದಲ್ಲಿ ಮಕ್ಕಳು ಡ್ರಗ್ಸ್ ಹಾಗೂ ಇತರ ಮಾದಕ ವಸ್ತುಗಳ ಸೇವನೆ ಮಾಡುತ್ತಿರುವುದು ಪಾಲಕರಿಗೆ ತಿಳಿಯುವುದಿಲ್ಲ. ಗುಟ್ಕಾ, ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ ಬರಲಿದೆ. ಹೀಗಾಗಿ ಪ್ರತಿಯೊಬ್ಬರೂ ಮಾದಕ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಶಮಂತಾ ಉದ್ಘಾಟಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ರಾಘವೇಂದ್ರ ಭಟ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರವೀಣ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುದುರೆಗುಂಡಿ ವಲಯ ಮೇಲ್ವಿಚಾರಕ ಸುಧೀರ್, ಕುದುರೆಗುಂಡಿ ಒಕ್ಕೂಟದ ಅಧ್ಯಕ್ಷ ರಾಜೇಶ್, ತಲಮಕ್ಕಿ ಒಕ್ಕೂಟದ ಅಧ್ಯಕ್ಷ ಗಣೇಶ, ಸುಧೀರ್, ರೂಪಾ, ಉಷಾ ಉಪಸ್ಥಿತರಿದ್ದರು.