ಯುವ ಸಾಹಿತ್ಯ ಇನ್ನಷ್ಟು ವಿಸ್ತರಿಸಲಿ

2SIRSI1
Published on

ಶಿರಸಿ: ಸಾಹಿತ್ಯದ ಒಡನಾಟ ಹಾಗೂ ಪುಸ್ತಕ ಓದಿನಿಂದ ಜ್ಞಾನ ಪ್ರವರ್ಧನೆ ಸಾಧ್ಯ ಎಂದು ಭಟ್ಕಳದ ಶ್ರೀವಲಿ ಪ್ರೌಢಶಾಲೆ 9 ತರಗತಿ ವಿದ್ಯಾರ್ಥಿ ಪ್ರಜ್ವಲ ಕಾಯ್ಕಿಣಿ ಹೇಳಿದರು.

ನಗರದ ಆವೇಮರಿಯಾ ಪ್ರೌಢಶಾಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಯುವ ಸಾಹಿತ್ಯ ಇನ್ನಷ್ಟು ವಿಸ್ತರಿಸಬೇಕು. ಯುವ ಬರಹಗಾರರು, ಕವಿಗಳಿಗೆ ಹಿರಿಯರಿಂದ ಪ್ರೋತ್ಸಾಹ ಸಿಗಬೇಕು. ಮಕ್ಕಳಲ್ಲಿನ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸಬೇಕು ಎಂದರು. ಅಂತರ್ಜಾಲ ಜ್ಞಾನಕ್ಕಿಂತ ಗ್ರಂಥಾಲಯದ ಜ್ಞಾನ ಭಂಡಾರ ಹೆಚ್ಚು. ಹೀಗಾಗಿ ಪುಸ್ತಕಗಳ ಓದು ಹೆಚ್ಚಬೇಕು. ಸಾಹಿತ್ಯದಲ್ಲಿ ತೊಡಗಿಕೊಂಡರೆ ಓದು ಹಾಗೂ ಜ್ಞಾನ ವಿಸ್ತಾರವಾಗುತ್ತದೆ. ಸಿಗುವ ಅವಕಾಶವನ್ನು ಬಳಸಿಕೊಂಡು ಬೆಳೆಯಬೇಕು ಎಂದರು.

ಮಕ್ಕಳ ಉತ್ತರ ಕನ್ನಡ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ದಿವಾಕರ ಶೆಟ್ಟಿ ಮಾತನಾಡಿ, ಕೇವಲ ಅಂಕಗಳಿಕೆ ಹಿಂದೆ ಪಾಲಕರು ಓಡುತ್ತಿದ್ದು, ಮಕ್ಕಳಲ್ಲಿ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಇದು ಭಾವಶೂನ್ಯ ಸಮಾಜದ ನಿರ್ವಣಕ್ಕೆ ನಾಂದಿಯಾಗುತ್ತಿದೆ. ಹೀಗಾಗಿ ಪಾಲಕರು ಮಕ್ಕಳ ಸಾಹಿತ್ಯಾಸಕ್ತಿಗೆ ನೀರೆರೆಯುವ ಅಗತ್ಯವಿದೆ. ಜತೆಗೆ, ಮಕ್ಕಳು ಕೂಡ ತಮ್ಮೊಳಗಿನ ಸಾಹಿತ್ಯವನ್ನು ನಿರಾತಂಕವಾಗಿ ಅಭಿವ್ಯಕ್ತಪಡಿಸಬೇಕಾದ ಅಗತ್ಯವಿದೆ ಎಂದರು.

ಹಿರಿಯ ಸಾಹಿತಿ ಎನ್.ಆರ್.ನಾಯಕ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯ ಫಲ ಸಮಾಜಕ್ಕೆ ಸಿಗಬೇಕು. ಸ್ವಸ್ಥ ಸಮಾಜ ನಿರ್ವಣದಲ್ಲಿ ಮಕ್ಕಳ ಸಾಹಿತ್ಯ ಕೊಡುಗೆ ನೀಡಬೇಕು. ಸರ್ಕಾರದ ನೀತಿಯಿಂದ, ಇಂಗ್ಲಿಷ್ ಭಾಷೆ ವ್ಯಾಮೋಹದಿಂದ ಮಾತೃಭಾಷೆ ಸತ್ವ ಕಳೆದುಕೊಳ್ಳುತ್ತಿದೆ. ಮಕ್ಕಳಲ್ಲಿ ಮಾತೃಭಾಷೆ ಕಲಿಕೆ ಆಗಬೇಕು. ಆಗ ಮಾತ್ರ ಸೃಜನಶೀಲ ಭಾವನೆ ಜಾಗೃತವಾಗುತ್ತದೆ ಎಂದರು.

ಕಾರ್ಯಕ್ರಮದ ಅಂಗವಾಗಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ನನ್ನ ಓದು ನನ್ನ ಅನುಭವ ವಿಷಯದ ಕುರಿತ ಗೋಷ್ಠಿ, ವಿದ್ಯಾರ್ಥಿ ಕಥಾಗೋಷ್ಠಿ, ಸಂಭಾಷಣಾ ಗೋಷ್ಠಿ, ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು. ಯಲ್ಲಾಪುರ ವೈ.ಟಿ.ಎಸ್.ಎಸ್.ನ ವಿದ್ಯಾರ್ಥಿನಿ ಸ್ವಾತಿ ನಾಯ್ಕ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಜಿಲ್ಲಾ ಸಂಚಾಲಕ ಸುಮುಖಾನಂದ ಜಲವಳ್ಳಿ, ಕಾರ್ಯದರ್ಶಿ ನಾರಾಯಣ ಹೆಗಡೆ, ಖಜಾಂಚಿ ವಿ.ಐ. ನಾಯಕ, ಪ್ರಮುಖರಾದ ಎಸ್.ಎಚ್. ಗೌಡ, ಚಂದ್ರಶೇಖರ ಪಡುವಣಿ, ಭಾರತಿ ನಲವಡೆ, ಗಂಗಾಧರ ಬಿ.ಎಸ್., ಸುರೇಶ ನಾಯ್ಕ ಇದ್ದರು. ವೇದಿಕೆ ತಾಲೂಕು ಸಂಚಾಲಕ ದೇವಿದಾಸ ನಾಯಕ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ ನಾಯ್ಕ ನಿರೂಪಿಸಿದರು.

ಕಥಾ, ಕವಿ, ಸಂಭಾಷಣೆ ಗೋಷ್ಠಿ: ‘ನನ್ನ ಓದು, ನನ್ನ ಅನುಭವ’ ಗೋಷ್ಠಿಯಲ್ಲಿ ಬಿ.ಎಲ್. ಸೃಜನ, ಪ್ರಿಯಾಂಕಾ ವಾಲೇಕರ್, ಶರಾವತಿ ಹಸ್ಲರ್, ಅದ್ವೈತ್ ಕಡ್ಲೆ, ರಕ್ಷಿತ ಬಸರಕೋಡ್, ಸಾಯಿಶ್ರೀ ಶೇಟ್, ಧನ್ಯಾ ಹೆಗಡೆ, ರಾಜಶ್ರೀ ಪಾಟೀಲ, ಪ್ರೀತಮ ಭಟ್ಟ, ದೀಪಾ ಆಚಾರಿ, ಹರಿಪ್ರಸಾದ ಪೂಜಾರಿ, ಎಂ. ರೇವತಿ ವಿಷಯ ಮಂಡಿಸಿದರು. ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿ ಕಥಾಗೋಷ್ಠಿಯಲ್ಲಿ ಕೆ.ಎಚ್. ಮನ್ನಾ, ಕೃತಿಕಾ ನಾಯ್ಕ, ಅನು ಘಾಡಿ, ಚೈತನ್ಯ ಮಡಿವಾಳ, ವಿಷ್ಣು ಹೆಗಡೆ, ಅನೀಶ ಮುದ್ಗೇಕರ್, ರುಕ್ಮಿಣಿ ಕೊಕರೆ, ಸೌಜನ್ಯ ಖಾರ್ವಿ, ನಿವೇದಿತಾ ಪಟಗಾರ, ಸವಿತಾ ಬಲವಂತರ ಸ್ವರಚಿತ ಕತೆ ವಾಚಿಸಿದರು. ಮಕ್ಕಳ ಕತೆ, ಕಾದಂಬರಿಕಾರ ಗಣೇಶ ನಾಡೋರ ಅಧ್ಯಕ್ಷತೆ ವಹಿಸಿದ್ದರು. ರಂಗ ಕಲಾವಿದ ಚಂದ್ರಶೇಖರ ಪಡುವಣಿ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡ ಸಂಭಾಷಣೆ ಗೋಷ್ಠಿಯಲ್ಲಿ ತೃಪ್ತಿ ಭಟ್ಟ, ರಕ್ಷಿತ ನಾಯ್ಕ, ಅಮೃತಾ ಹೆಗಡೆ, ಲಕ್ಷ್ಮಣ ಮಲಗೊಂಡೆ, ರುಹೀದ್ ಎಸ್., ಅಂಜಲಿ ಸಿಂಧೆ, ಸಾತ್ವಿಕ ಭಟ್ಟ, ಪಲ್ಲವಿ ನಾಯ್ಕ, ತೇಜ ಅವಧಾನಿ, ತೇಜ ಮೊಗೇರ, ಲಕ್ಷ್ಮಿ ಕೊಲಪ್ಟೆ, ಚೈತ್ರ ನಾಯ್ಕ ಭಾಗವಹಿಸಿದ್ದರು. ಮಕ್ಕಳ ಕವಿ ನಾಗೇಂದ್ರ ನಾಯ್ಕ ತೊರ್ಕೆ ಅಧ್ಯಕ್ಷತೆಯಲ್ಲಿ ನಡೆದ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಗಾನಾ ಶೆಟ್ಟಿ, ಭೂಮಿಕಾ ನಾಯಕ, ಅಂಕಿತ ನಾಯ್ಕ, ಭಾರತಿ ಪಟಕಾರೆ, ಪ್ರಿಯಾಂಕಾ ಕೆ.ಎಂ., ದೀಪಾ ನಾಯ್ಕ, ಮುಕ್ತಾ ಭಟ್ಟ, ಸೌಜನ್ಯ ರಾಯ್ಕರ, ನಿಶಾ ನಾಯ್ಕ, ಸಹನಾ ಅರ್ಕಸಾಲಿ, ನಿಸ್ರಿತ್ ತೇಲ್ಕರ್, ಹರ್ಷಿತ ಮೊಗೇರ, ಯಶಸ್ವಿನಿ ಹೆಗಡೆ, ಸುಜನ ನಾಯ್ಕ, ಸಂಧ್ಯಾ ನಾಯ್ಕ, ಧ್ರುವ ಭಟ್ಟ ಸ್ವರಚಿತ ಕವನ ವಾಚಿಸಿದರು.

ಜಿಲ್ಲೆಯ ಮಕ್ಕಳ ಸಾಹಿತ್ಯದ ಕುರಿತು ಸಾಹಿತ್ಯ ವಲಯದಲ್ಲಿ ಚಿಂತನ-ಮಂಥನ ಆರಂಭವಾಗಬೇಕು. ಆ ಮೂಲಕ ಶಿಕ್ಷಣದ ಗುಣಮಟ್ಟ ಹಾಗೂ ಶೈಕ್ಷಣಿಕ ಬೆಳವಣಿಗೆಗೂ ಕೊಡುಗೆ ನೀಡಬೇಕು.- ಸುಮುಖಾನಂದ ಜಲವಳ್ಳಿ- ವೇದಿಕೆ ಜಿಲ್ಲಾ ಸಂಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net