

ಬಾಗಲಕೋಟೆ: ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಸ್ವಾತಂತ್ರ‍್ಯ ದೊರಕಿಸಿಕೊಟ್ಟ ಹೋರಾಟಗಾರರು ಹಾಗು ರಾಷ್ಟ್ರದ ರಕ್ಷಣೆಗಾಗಿ ಬಲಿದಾನ ಗೈಯುವ ಯೋಧರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆಯಾಗಬೇಕು ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಹೇಳಿದರು.
ನಗರದ ಬಿವಿವಿ ಸಂಘದ ಬೀಮ್ಸ್ ಎಂ.ಬಿ.ಎ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ರಾಷ್ಟ್ರಪ್ರೇಮ ಬೆಳೆಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ ಎಂದರು.
ಪ್ರೊ.ಜಿ.ಬಿ.ದಾನಶೆಟ್ಟಿ ಮಾತನಾಡಿ, ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಯ ಕುರಿತು ಜಾಗೃತಿ ಅವಶ್ಯಕವಾಗಿದೆ. ಶಾಲಾ, ಕಾಲೇಜು ಹಂತಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಡಮೂಡಿದರೇ ಅದು ಪ್ರೇರಣಾ ಶಕ್ತಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ೨೦ಕ್ಕೂ ಹೆಚ್ಚು ಪದವಿ ಕಾಲೇಜುಗಳ ಅಂದಾಜು ೨೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಂಗೋಲಿ, ಫೇಸ್ ಪೇಂಟಿಂಗ್, ಸಮೂಹ ನೃತ್ಯ, ಗುಂಪು ಗಾಯನ ಕಾರ್ಯಕ್ರಮಗಳು ಜರುಗಿದವು.
ಬಿಮ್ಸ್ ಸಂಸ್ಥೆಯ ನಿರ್ದೇಶಕ ಡಾ.ಪ್ರಕಾಶ್ .ಕೆ. ವಡವಡಗಿ ಅಧ್ಯಕ್ಷತೆ ವಹಿಸಿದ್ದರು. ಶೃತಿ ವಾರದ, ಎಸ್.ಎಸ್. ನಾಶಿಮಠ, ವಿಜಯಲಕ್ಷ್ಮೀ ಸಿ. ಪಾಟೀಲ, ಜ್ಯೋತಿ ಬುರ್ಲಿ, ಶಿಲ್ಪಾ ಯರಗುಪ್ಪಿ, ಶುಭುಧಾ ದೇಶಪಾಂಡೆ, ನಮ್ರತ ಹಿರೇಮಠ ಇದ್ದರು. ಸೌದರ್ಯ ಮತ್ತು ರೋಹಿತ್ ಹಂಗರಗಿ ನಿರೂಪಿಸಿದರು. ಸಂತೋಷ್ ಕುಮಾರ್ ಮತ್ತು ಡಾ.ಪವನ್ ಬೆನಕಟ್ಟಿ ಪರಿಚಯಿಸಿದರು. ಐಶ್ವರ್ಯ ಪಾಟೀಲ್ ವಂದಿಸಿದರು.