ಯುರಿಯಾ ರಸಗೊಬ್ಬರಕ್ಕೆ ಮುಗಿಬಿದ್ದ ರೈತರು

05 hkr 01
Published on

ಹಿರೇಕೆರೂರ: ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬಾರಿ ಬೇಡಿಕೆ ಬಂದಿದ್ದು, ರೈತರು ಸಹಕಾರ ಸಂಘಗಳ ಕಚೇರಿ ಎದುರು ಪರಸ್ಪರ ಅಂತರ ಕಾಪಾಡಿಕೊಳ್ಳದೆ ಸರದಿಯಲ್ಲಿ ನಿಂತು ಗೊಬ್ಬರ ಖರೀದಿಸುತ್ತಿರುವುದರಿಂದ ಆತಂಕದ ಪರಿಸ್ಥಿತಿ ನಿರ್ವಣವಾದೆ.

ರೈತರು ಬಿತ್ತನೆ ಕಾರ್ಯ ಪೂರ್ಣ ಗೊಳಿಸಿದ ನಂತರ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಬೆಳೆಗಳು ಉತ್ತಮವಾಗಿ ಬೆಳೆದಿವೆ. ಈಗ ಬೆಳೆಗೆ ಯೂರಿಯಾ ಗೊಬ್ಬರ ಹಾಕುವ ಹಂತವಾಗಿದ್ದರಿಂದ ಏಕಕಾಲಕ್ಕೆ ರೈತರು ಗೊಬ್ಬರ ಖರೀದಿಸಲು ಮುಗಿಬೀಳುತ್ತಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಿಂದ ಬೆಳಗ್ಗೆ 5 ಗಂಟೆಗೆ ಬರುವ ರೈತರು ಗೊಬ್ಬರ ಕೇಂದ್ರಗಳ ಎದುರು ಸರದಿ ನಿಲ್ಲುತ್ತಿದ್ದಾರೆ. ಆದರೆ, ಕೆಲವರು ಮಾಸ್ಕ್ ಧರಿಸುತ್ತಿಲ್ಲ, ಪರಸ್ಪರ ಅಂತರ ಪಾಲಿಸುತ್ತಿಲ್ಲ. ಸ್ಥಳಕ್ಕೆ ಪೊಲೀಸರು ಬಂದಾಗ ನಿಯಮ ಪಾಲಿಸುವ ರೈತರು, ಅವರು ತೆರಳಿದ ನಂತರ ನಿಯಮ ಮುರಿಯುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಇಫ್ಕೋ, ಕ್ರಿಭ್ಕೋ ರಸಗೊಬ್ಬರ ಕಂಪನಿಯಿಂದ ಒಟ್ಟು 1250 ಮೆಟ್ರಕ್ ಟನ್ ಯೂರಿಯಾ ಗೊಬ್ಬರ ಪಟ್ಟಣದ ಟಿಎಪಿಎಂಎಸ್ ಕೇಂದ್ರಕ್ಕೆ ಬಂದಿದೆ. ತಾಲೂಕಿನಲ್ಲಿ ಈಗಾಗಲೇ 600 ಮೆಟ್ರಿಕ್ ಟನ್ ಯೂರಿಯಾ ವಿತರಣೆಯಾಗಿದೆ. ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರ ವಿತರಿಸಲಾಗುವುದು. | ಎಸ್.ಎಸ್. ಪಾಟೀಲ ಟಿಎಪಿಎಂಎಸ್ ಅಧ್ಯಕ್ಷ ಕಳೆದ 3 ದಿನಗಳಲ್ಲಿ ತಾಲೂಕಿನ ವಿವಿಧ ಸಹಕಾರಿ ಸಂಘ ಹಾಗೂ ಖಾಸಗಿ ಅಂಗಡಿಗಳಿಂದ ನಿಗದಿಪಡಿಸಿದ ದರದಲ್ಲಿ 1500 ಟನ್ ಗೊಬ್ಬರ ವಿತರಿಸಲಾಗಿದೆ. ರೈತರ ಅಗತ್ಯಕ್ಕೆ ತಕ್ಕಂತೆ ಗೊಬ್ಬರ ವಿತರಣೆಗೆ ಯೋಜನೆ ರೂಪಿಸಿದ್ದು, ತಾಲೂಕಿನಲ್ಲಿ ಕ್ರಿಭ್ಕೋ ರಸಗೊಬ್ಬರ ಕಂಪನಿ 600 ಮೆಟ್ರಿಕ್ ಟನ್ ಹಾಗೂ ಇಫ್ಕೋ ಕಂಪನಿ 650 ಮೆಟ್ರಿಕ್ ಟನ್ ಸೇರಿ ಒಟ್ಟು 1250 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ತಾಲೂಕಿಗೆ ಕಳುಹಿಸಿದ್ದಾರೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು. | ಎಂ.ವಿ. ಮಂಜುನಾಥ ಸಹಾಯಕ ಕೃಷಿ ನಿರ್ದೇಶಕ ಹಿರೇಕೆರೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net