

ಸಾಲಿಗ್ರಾಮ: ಯುಪಿಎಸ್ಸಿ ಪರೀಕ್ಷೆಯಲ್ಲಿ 263 ರ‌್ಯಾಂಕ್ ಪಡೆದ ತಾಲೂಕಿನ ಅಂಕನಹಳ್ಳಿ ಗ್ರಾಮದ ಎ.ಸಿ.ಪ್ರೀತಿ ಹಾಗೂ ಪಾಲಕರನ್ನು ವಿವಿಧ ಮುಖಂಡರು ಗುರುವಾರ ಅಭಿನಂದಿಸಿದರು.
ಕೆ.ಆರ್.ನಗರ ಪುರಸಭೆ ಸದಸ್ಯ ಕೆ.ಎಲ್.ಜಗದೀಶ್ ಸನ್ಮಾನಿಸಿ ಮಾತನಾಡಿ, ಪ್ರೀತಿ ಅವರು ಕಡು ಬಡತನದಲ್ಲೂ ಛಲ ಬಿಡದೆ ತನ್ನ ಗುರಿ ಮುಟ್ಟಿದ್ದಾರೆ. ಪ್ರೀತಿ ನಿಜಕ್ಕೂ ಹಳ್ಳಿಯ ಅಸಾಧಾರಣ ಪ್ರತಿಭೆ. ಇವರ ವೃತ್ತಿ ಜೀವನ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಸಾಧಕಿ ಎ.ಸಿ.ಪ್ರೀತಿ ಮಾತನಾಡಿ, ನಾನು ಎರಡನೇ ಪ್ರಯತ್ನದಲ್ಲಿ ವಿಫಲವಾದಾಗ ಆಸೆ ಕೈ ಬಿಟ್ಟಿದ್ದೆ. ತಂದೆಯ ಒತ್ತಾಸೆಯಿಂದಾಗಿ ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದೇನೆ. ಕುಗ್ರಾಮದಲ್ಲಿ ಜನಿಸಿ ಎಸ್‌ಎಸ್‌ಎಲ್‌ಸಿವರೆಗೆ ತವರಲ್ಲಿ ಶಿಕ್ಷಣ ಪಡೆದು ನಂತರ ಪಿಯುಸಿಯಲ್ಲಿ ಕೆ.ಆರ್.ನಗರದ ಸರ್ಕಾರಿ ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದೆ. ಬಡತನ ಇದ್ದರೂ ಕೃಷಿಯಲ್ಲಿ ಬಿಎಸ್ಸಿ, ಎಂಎಸ್ಸಿ ಪದವಿ ಪಡೆದೆ. ಮೊದಲೆರಡು ಪ್ರಿಲಿಮನರಿ ಪರೀಕ್ಷೆಯಲ್ಲಿ ಫೇಲಾದೆ. ವೃತ್ತಿಯಲ್ಲಿ ಅಡುಗೆ ಭಟ್ಟರಾಗಿರುವ ತಂದೆ ನನಗೆ ಧೈರ್ಯ ತುಂಬಿ ಎಷ್ಟೇ ಹಣವಾದರೂ ಸರಿ ನಾನು ಭರಿಸುವೆ. ಇದೊಂದು ಬಾರಿ ಪ್ರಯತ್ನಪಡು ಎಂದು ಹುರಿದುಂಬಿಸಿದರು. ತಂದೆಯ ಸ್ಥೈರ್ಯದ ಮಾತುಗಳಿಂದ ಪ್ರೇರಣೆಗೊಂಡು ಮೂರನೇ ಬಾರಿಗೆ ಯಶಸ್ಸು ಕಂಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಉತ್ತರಪ್ರದೇಶ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿಗಳಿಬ್ಬರು ನನ್ನ ಸಾಧನೆಗೆ ಸ್ಫೂರ್ತಿ. ನನ್ನ ಹುಟ್ಟೂರು ಜನತೆಯ ಆಶೀರ್ವಾದ, ಜನತೆ ನನ್ನ ಮೇಲಿಟ್ಟಿದ ನಂಬಿಕೆ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ನನ್ನ ಶ್ರಮ ಶೇ.40, ನನ್ನ ತಂದೆ, ತಾಯಿಯ ಪರಿಶ್ರಮ ಶೇ.60. ನನ್ನ ತಂದೆ ತಾಯಿಯೇ ನಿಜವಾದ ಸಾಧಕರು ಎಂದು ಖುಷಿ ಹಂಚಿಕೊಂಡರು.
ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಜಶೇಖರ್, ನಂಜನಗೂಡು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ದೀಪು, ಕೆ.ಎಲ್.ರಮೇಶ್, ಮಹದೇವ್, ಶಿಕ್ಷಕ ಮಹೇಶ್, ಯತೀಶ್, ಪ್ರೀತಿ ತಂದೆ ಚನ್ನಬಸಪ್ಪ, ತಾಯಿ ನೇತ್ರಾವತಿ, ಗ್ರಾಮದ ಮುಖಂಡರು ಇದ್ದರು.