ಯಾಣ ಪ್ರಯಾಣ ಹೈರಾಣ...

23sirsi2
Published on

ಶಿರಸಿ: ಪ್ರಸಿದ್ಧ ಪ್ರವಾಸಿ ತಾಣವಾದ ಯಾಣಕ್ಕೆ ಸಾಗುವ ರಸ್ತೆ ತೀರ ಹಾಳಾಗಿ ಸಾಕಷ್ಟು ಸಮಯವೇ ಸಂದಿದೆ. ಹೀಗಿದ್ದರೂ ರಸ್ತೆ ದುರಸ್ತಿಗೆ ಮುಂದಾಗದ ಕಾರಣ ಪ್ರವಾಸಿಗರು ಇಲ್ಲಿಗೆ ಬರಲು ಹಿಂದೇಟು ಹಾಕುವಂತಾಗಿದೆ. ತ್ರಾಣವಿದ್ದರೂ ಯಾಣ ತಲುಪುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ವಣವಾಗಿದೆ.

ಕುಮಟಾ ಹಾಗೂ ಶಿರಸಿ ಮೂಲಕ ಒಟ್ಟಾರೆ ಎರಡು ಮಾರ್ಗಗಳಲ್ಲಿ ಯಾಣಕ್ಕೆ ತಲುಪಬಹುದು. ಉತ್ತರ ಕರ್ನಾಟಕ ಭಾಗಗಳಿಂದ ಬರುವವರು ಶಿರಸಿ- ದೇವನಳ್ಳಿವಡ್ಡಿ - ಗೋಕರ್ಣ (ರಾಜ್ಯ ಹೆದ್ದಾರಿ 143) ರಸ್ತೆಯಲ್ಲಿ ಸಾಗಿ, ಯಾಣಕ್ಕೆ ತಲುಪುತ್ತಾರೆ. ಈ ಹೆದ್ದಾರಿಯಲ್ಲಿ ಶಿರಸಿಯಿಂದ 40 ಕಿ.ಮೀ. ಸಾಗಿದರೆ, ಅಡ್ಡ ತಿರುವಿನಲ್ಲಿ ಕಚ್ಚಾ ರಸ್ತೆ ಬರುತ್ತದೆ. 4-5 ಕಿ.ಮೀ ಇರುವ ಈ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಲೂ ಪ್ರಯಾಸ ಪಡಬೇಕಾದ ಸ್ಥಿತಿಯಿದೆ.

ಕರಾವಳಿ ಭಾಗದಿಂದ ಕೆಲವು ಪ್ರವಾಸಿಗರು ಬಂದರೆ, ಇನ್ನು ಕೆಲವರು ಶಿರಸಿ ಮಾರ್ಗವಾಗಿ ಬರುತ್ತಾರೆ. ಎರಡೂ ಕಡೆಯಿಂದ ಬರುವವರು ಒಳಗಿನ ಮೂರು ಕಿ.ಮೀ. ರಸ್ತೆಯಲ್ಲಿ ಸಾಗಿಯೇ ಯಾಣ ತಲುಪಬೇಕು. ಆದರೆ, ಈ ರಸ್ತೆಯ ಸ್ಥಿತಿ ನೋಡಿದರೆ, ತಮಗೇ ನಾಚಿಕೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳಿಕರು.

ಕುಮಟಾ- ಶಿರಸಿ ಮಾರ್ಗದಲ್ಲಿ ಕುಮಟಾದಿಂದ 10 ಕಿ.ಮೀ. ದೂರಕ್ಕೆ ಆನೆಗುಂದಿ ಗ್ರಾಮದಿಂದ ಬರುತ್ತದೆ. ಇಲ್ಲಿಯ ಎಡ ತಿರುವಿನಲ್ಲಿ 8 ಕಿ.ಮೀ. ಸಾಗಿದರೆ ಯಾಣ ಬರುತ್ತದೆ. ಆದರೆ, ಈ ಮಾರ್ಗದಲ್ಲಿ ಸುಮಾರು 3 ಕಿ.ಮೀ. ಅಂತರದವರೆಗೆ ವಾಹನ ಹೋಗುವಂತಹ ರಸ್ತೆ ಇಲ್ಲದ್ದರಿಂದ ನಡೆದುಕೊಂಡೇ ಯಾಣಕ್ಕೆ ತೆರಳಬೇಕಾಗಿದೆ. ಹೀಗಾಗಿ, ಬಹುತೇಕ ಪ್ರವಾಸಿಗರು ಶಿರಸಿ ಮಾರ್ಗವಾಗಿ ಯಾಣಕ್ಕೆ ತೆರಳುತ್ತಾರೆ.

ಕಾರೆತ್ತಲು ಬೇಕಾಯಿತು ಜೆಸಿಬಿ...

ಮಹಿಳೆಗೆ ಹೃದಯಾಘಾತ..

ಕರೊನಾ ಭೀತಿ ಸ್ವಲ್ಪ ಕಡಿಮೆಯಾದ ನಂತರ ಯಾಣಕ್ಕೆ ಬರುವ ಪ್ರವಾಸಿಗರ ಬರುವುದು ಹೆಚ್ಚುತ್ತಿದೆ. ಆದರೆ, ವಾರದ ಹಿಂದೆ ಶಿರಸಿ ಮುಖಾಂತರದ ರಸ್ತೆಯಲ್ಲಿ ಬಂದಿದ್ದ ಕಾರೊಂದು ಹೊಂಡದಲ್ಲಿ ಸಿಕ್ಕಿಕೊಂಡಿತ್ತು. ನಂತರ ಜೆಸಿಬಿ ತಂದು ಕಾರನ್ನು ಮೇಲೆತ್ತಲಾಯಿತು. ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ಗುಂಡಿ ದಾಟಿಸಲು ಹೋಗಿದ್ದ ಪ್ರವಾಸಿಗರೊಬ್ಬರ ಕಾರಿನ ಚೇಂಬರ್ ಒಡೆದಿದೆ. ವಾಹನದಲ್ಲಿ ಕುಳಿತುಕೊಂಡು ಪ್ರಯಾಣಿಸಲು ಸಾಧ್ಯವಾಗದೆ, ಮಹಿಳೆಯೊಬ್ಬರು ಕಾಲ್ನಡಿಗೆಯಲ್ಲಿ ಹೋಗಿ, ನಂತರ ಹೃದಯಾಘಾತಕ್ಕೆ ಒಳಗಾದರು. ಇಷ್ಟಾದರೂ, ಈ ತಾಣದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನಹರಿಸಿಲ್ಲ ಎಂದು ಸ್ಥಳಿಕರು ಅಸಹಾಯಕವಾಗಿ ನುಡಿದರು.

ಯಾಣಕ್ಕೆ ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ದಿನಕಳೆದಂತೆ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಬದಲು ಇಳಿಮುಖ ಆಗುತ್ತಿದೆ. ರಸ್ತೆ ಸಂಚಾರ ತೀರಾ ಅಪಾಯಕರ ಸ್ಥಿತಿಯಲ್ಲಿರುವ ಕಾರಣ ಪ್ರಯಾಣಿಕರು ಕಂಗಾಲಾಗಿದ್ದಾರೆ. | ಸೋಮು ಮರಾಠಿ

ಸ್ಥಳಿಕ

ಯಾಣಕ್ಕೆ ತೆರಳುವ 5 ಕಿ.ಮೀ. ರಸ್ತೆ ಅಭಿವೃದ್ಧಿ ಆಗಬೇಕಿದೆ. ಮಳೆಗಾಲದಲ್ಲಿ ಗುಡ್ಡ ಕುಸಿದ ಕಾರಣ ಸಂಚಾರ ಸಮಸ್ಯೆ ಉಂಟಾಗಿತ್ತಾದರೂ, ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಲಾಗಿದೆ. ಶೀಘ್ರದಲ್ಲಿ ರಸ್ತೆ ಅಭಿವೃದ್ಧಿ ಕೂಡ ಮಾಡಲಾಗುವುದು. -ರಾಮಲಿಂಗೇಶ- ಲೋಕೋಪಯೋಗಿ ಇಲಾಖೆ ಎಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net