

ವಿಜಯವಾಣಿ ಸುದ್ದಿಜಾಲ ಕಾರವಾರ: ಆಫ್ರಿಕಾದ ನಿಗ್ರೋಗಳಂತೆ ಕಡುಗಪ್ಪು ಬಣ್ಣ, ಕಟ್ಟುಮಸ್ತಾದ ಕಲ್ಲಿನಂಥ ದೇಹ. ಗುಂಗುರು ಕೂದಲು. ಇದು ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮಾತ್ರ ಕಾಣಸಿಗುವ ಸಿದ್ದಿ ಬುಡಕಟ್ಟು ಜನಾಂಗದ ಚಿತ್ರಣ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ,ಮುಂಡಗೋಡ ತಾಲೂಕುಗಳಲ್ಲಿ ನೆಲೆಸಿರುವ ಈ ಜನಾಂಗಕ್ಕೆ ತನ್ನದೇ ಆದ ಸಂಸ್ಕೃತಿ, ಆಚರಣೆ, ಕಾಡಿನ ಕೌಶಲಗಳಿವೆ. ಕಾಡಿನ ಉತ್ಪನ್ಬ ಬಿಟ್ಟರೆ ಕೃಷಿ ಮಾತ್ರ ಇವರಿಗೆ ಗೊತ್ತಿರುವ ಉದ್ಯೋಗ.
ಆದರೆ ಈಗ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಅವರದ್ದೇ ಪರಿಸರ, ಜ್ಞಾನ ಬಳಸಿಕೊಂಡು ಅವರಿಗೆ ಬೇರೆ ಉದ್ಯೋಗ ಕಲ್ಪಿಸುವ ಯೋಜನೆ ರೂಪಿಸಿದೆ.
ಯಲ್ಲಾಪುರ ತಾಲೂಕಿನಲ್ಲಿ ಎನ್ಆರ್‌ಎಲ್ಎಂ ಯೋಜನೆಯಡಿ ಸಿದ್ದಿ ಸಮುದಾಯದ ಮಹಿಳೆಯರಿಂದ “ಇಂಡಿಜೀನಸ್ ಟೂರಿಸಂ”ಹೆಸರಿನಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
ಸಿದ್ದಿ ಸಮುದಾಯದ ಸ್ವ ಸಹಾಯ ಸಂಘಗಳ ಮಹಿಳೆಯರು ಹೋಂ ಸ್ಟೇ ನಿರ್ಮಾಣಕ್ಕಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 50 ಲಕ್ಷ ರೂ. ತರಬೇತಿ, ಹೊರ ರಾಜ್ಯದ ಪ್ರವಾಸ, ವೆಬ್ಸೈಟ್ ನಿರ್ವಹಣೆ, ಪ್ರಚಾರಕ್ಕಾಗಿ ಸಂಜೀವಿನಿ-ಎನ್ಆರ್‌ಎಲ್ಎಂ ಯೋಜನೆಯಡಿ 19. ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಸಿದ್ದಿ ಸಮುದಾಯದ ಸಾಂಸ್ಕೃತಿಕ ವೈಭವವನ್ನು ಹೊರ ಜಗತ್ತಿಗೆ ಪರಿಚಯಿಸುವ ಮತ್ತು ಜಿಲ್ಲೆಯ ಸುಂದರ ಪರಿಸರದ ಅನುಭವವನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಸಿಗುವ ಔಷಧಿಯ ಗುಣವುಳ್ಳ ಸಸ್ಯಗಳ ಪರಿಚಯ, ಅದರ ಉಪಯೋಗ, ಬುಡಕಟ್ಟು ಸಮುದಾಯದ ಜೀವನ ಶೈಲಿಯ ವಿಧಾನ, ಆಚಾರ ವಿಚಾರ, ನಂಬಿಕೆ, ಆಚರಣೆ, ಆಹಾರ ಪದ್ದತಿ, ಜಲಪಾತಗಳ ದರ್ಶನ ಇತ್ಯಾದಿಗಳನ್ನು ಈ ಪರಿಸರ ಸ್ನೇಹಿ ಪ್ರವಾಸೋದ್ಯಮ ಚಟುವಟಿಕೆಯು ಒಳಗೊಂಡಿರುತ್ತದೆ. ಕಳೆದ ಸಾಲಿನಲ್ಲಿ ಜೊಯಿಡಾ ರಾಮನಗರದ ಆದಿಶಕ್ತಿ ಸ್ವ ಸಹಾಯ ಸಂಘಕ್ಕೆ ನೆರವು ನೀಡಲಾಗಿತ್ತು. ಸಂಘವು ಸಂಜೀವಿನಿ ಇಕೊ ಟೂರಿಸಂ ಪ್ರಾರಂಭಿಸಿ ಈಗ ನೆರವು ಪಡೆದು ಉತ್ತುಮವಾಗಿ ಪ್ರವಾಸೋದ್ಯಮ ಚಟುವಟಿಕೆ ನಡೆಸಿದೆ.
ಸಿದ್ದಿ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಆರ್ಥಿಕ, ತಾಂತ್ರಿಕ ನೆರವು ನೀಡಿ, ಅವರನ್ನು ಸ್ವಾವಲಂಬಿಯನ್ನಾಗಿ ಮಾಡಿ,ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಲಾಗಿದೆ ಎಂದು ಜಿಪಂ ಸಿಇಒ ಪ್ರಿಯಾಂಗಾ ಎಂ. ತಿಳಿಸಿದ್ದಾರೆ.