ಯಲ್ಲಾಪುರ ತಾ.ಪಂ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಭವ್ಯಾ ಶೆಟ್ಟಿ

07 YLP 06
Published on

ಯಲ್ಲಾಪುರ: ತಾಲೂಕು ಪಂಚಾಯಿತಿ ಅಧ್ಯಕ್ಷೆ ಭವ್ಯಾ ಶೆಟ್ಟಿ ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ಕಾರವಾರದಲ್ಲಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದಾರೆ.

ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಒಂದೆರಡು ದಿವಸಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೊಷಣೆ ಮಾಡಿದ್ದರು. ಅದರಂತೆ ಮಂಗಳವಾರವೇ ರಾಜೀನಾಮೆ ಸಲ್ಲಿಸಿದ್ದು, ಈ ವೇಳೆ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸದಸ್ಯರಾದ ರಾಧಾ ಹೆಗಡೆ, ಮಾಲಾ ಚಂದಾವರ, ಕವಿತಾ ತಿನೆಕರ್, ಮಂಗಲಾ ನಾಯ್ಕ ಉಪಸ್ಥಿತರಿದ್ದರು. ನಾಲ್ಕು ವರ್ಷಗಳ ಹಿಂದೆ ನಡೆದ ತಾ.ಪಂ. ಚುನಾವಣೆಯಲ್ಲಿ ಬಿಜೆಪಿ 6 ಹಾಗೂ ಕಾಂಗ್ರೆಸ್ 5 ಸ್ಥಾನಗಳಲ್ಲಿ ಜಯ ಗಳಿಸಿದ್ದವು. ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಭವ್ಯಾ ಶೆಟ್ಟಿ ಕಾಂಗ್ರೆಸ್​ನ 5 ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಅಧ್ಯಕ್ಷರು ಹಾಗೂ ಕೆಲ ಸದಸ್ಯರ ನಡುವಿನ ಭಿನ್ನಾಭಿಪ್ರಾಯ, ಸಮನ್ವಯದ ಕೊರತೆ ಬಹಿರಂಗವಾಗಿಯೇ ರ್ಚಚಿತವಾಗುತ್ತಿತ್ತು. ಭವ್ಯಾ ಶೆಟ್ಟಿ ಅಧ್ಯಕ್ಷರಾದ ನಂತರ ಬಿಜೆಪಿಯ ಜತೆ ಗುರುತಿಸಿಕೊಳ್ಳದೇ ಕಾಂಗ್ರೆಸ್ ಶಾಸಕರಾಗಿದ್ದ ಹೆಬ್ಬಾರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕ್ರಿಯಾಶೀಲ ಕಾರ್ಯಗಳ ಮೂಲಕ ಜಿಲ್ಲೆಯಲ್ಲಿ ಉತ್ತಮ ಹೆಸರು ಗಳಿಸಿದರು. ಸ್ಥಳೀಯ ಬಿಜೆಪಿ ಪ್ರಮುಖರು ಭವ್ಯಾ ಶೆಟ್ಟಿ ಅವರ ವಿರುದ್ಧ ಪಕ್ಷದ ಜಿಲ್ಲೆ ಹಾಗೂ ರಾಜ್ಯದ ಹಿರಿಯರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇದೀಗ ಹೆಬ್ಬಾರ ಬಿಜೆಪಿಗೆ ಬಂದಿದ್ದು, ಅವರ ಬೆಂಬಲಿಗರಾಗಿ ತಾ.ಪಂ.ನ ಎಲ್ಲ 5 ಕಾಂಗ್ರೆಸ್ ಸದಸ್ಯರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಭೆಯಲ್ಲಿ ಗುರುತಿಸಿಕೊಂಡಾಗಲೂ ಭವ್ಯಾ ಅವರಿಗೆ ನಿರೀಕ್ಷಿತ ಗೌರವ ಸಿಕ್ಕಿರಲಿಲ್ಲ. ಬಿಜೆಪಿ ಮುಖಂಡರಿಂದ ಅವರ ರಾಜೀನಾಮೆಗೆ ಒತ್ತಾಯ ಕೇಳಿ ಬಂದಿದ್ದು, ಬಿಜೆಪಿ ಮುಖಂಡರ ಒತ್ತಾಯಕ್ಕೆ ಮಣಿದು ಶಾಸಕರು ರಾಜೀನಾಮೆ ಸಲ್ಲಿಸಿ, ಬೇರೆಯವರಿಗೆ ಅವಕಾಶ ನೀಡುವಂತೆ ಭವ್ಯಾ ಅವರಲ್ಲಿ ಕೇಳಿದ್ದರು. ಎಲ್ಲ ನೋವು-ನಿರಾಸೆಗಳನ್ನು ತಾಳ್ಮೆಯಿಂದ ಎದುರಿಸಿದ ಅವರು, ಶಾಸಕರ ಮಾತನ್ನು ಮನ್ನಿಸಿ ಸ್ಥಾನ ತೊರೆದಿದ್ದಾರೆ.

ಅಧ್ಯಕ್ಷ ಹುದ್ದೆಗೆ ಪೈಪೋಟಿ : ಮುಂದಿನ 9 ತಿಂಗಳ ಅವಧಿಗಾಗಿ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಚಂದ್ರಕಲಾ ಭಟ್ಟ ಹಾಗೂ ರಾಧಾ ಹೆಗಡೆ ನಡುವೆ ಪೈಪೋಟಿ ಏರ್ಪಟ್ಟಿದೆ. ನಾಲ್ಕು ವರ್ಷಗಳ ಹಿಂದೆಯೂ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಚಂದ್ರಕಲಾ ಭಟ್ಟ ಅವರ ಹೆಸರು ಕೇಳಿ ಬಂದಿತ್ತು. ರಾಧಾ ಹೆಗಡೆ ಹೆಬ್ಬಾರ ಬೆಂಬಲಿಗರಾಗಿ ಬಿಜೆಪಿಗೆ ಬಂದವರಾಗಿದ್ದು, ಯಾರಿಗೆ ಅಧ್ಯಕ್ಷ ಪಟ್ಟ ಒಲಿಯಲಿದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net