ಯಡೂರ ಗ್ರಾಮದಲ್ಲಿ ಜ.14ರಿಂದ ಧರ್ಮ ಜಾಗೃತಿ ಯಾತ್ರೆ

16BGV10
Published on

ಮಾಂಜರಿ: ಸಮೀಪದ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಜಗದ್ಗುರು ಪಂಚಪೀಠಾಧೀಶ್ವರರ ಸಾನ್ನಿಧ್ಯದಲ್ಲಿ ರಾಜಗೋಪುರಗಳ ಲೋಕಾರ್ಪಣೆ, ಮಹಾಕುಂಭಾಭಿಷೇಕ, ಲಕ್ಷ ದೀಪೋತ್ಸವ, ಕೃಷ್ಣಾರತಿ ಮತ್ತು ಧರ್ಮ ಜಾಗೃತಿ ಯಾತ್ರೆ 2026ರ ಜನವರಿ 14 ರಿಂದ ಮಾರ್ಚ್ 6ರವರೆಗೆ ಜರುಗಲಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಮೀಪದ ಯಡೂರು ಗ್ರಾಮದ ಕಲ್ಯಾಣಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇವಾಲಯದ ನವೀಕರಣದ ಭಾಗವಾಗಿ ಪೂರ್ವ ದಿಕ್ಕಿನಲ್ಲಿ ಹೊಸದಾಗಿ ನಿರ್ಮಿಸಿರುವ ರಾಜಗೋಪುರ, ಜೀರ್ಣೋದ್ಧಾರಗೊಂಡಿರುವ ಭದ್ರಕಾಳಿ ಅಮ್ಮನವರ ದೇಗುಲದ ಶಿಖರ, ದೇಗುಲದ ಮುಖಮಂಟಪ, ಪ್ರದಕ್ಷಿಣಾಪಥ, ರಥಬೀದಿ, ದಕ್ಷಿಣದ್ವಾರ, ಉತ್ತರದ್ವಾರ, ಉತ್ತರ ರಾಜಗೋಪುರ, ದಕ್ಷಿಣ ರಾಜಗೋಪುರ, ಕಾಂಪೌಂಡ್ ಲೋಕಾರ್ಪಣೆ ಅಂಗವಾಗಿ ಮೂರು ತಿಂಗಳವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಪ್ರಾಚೀನ ದೇವಾಲಯ ಜೀರ್ಣೋದ್ಧಾರಗೊಂಡ ನಂತರ ಅದನ್ನು ಶುದ್ಧೀಕರಣಗೊಳಿಸಬೇಕಾಗುತ್ತದೆ. ವೀರಶೈವ ಆಗಮ ಪದ್ಧತಿಯನ್ವಯ ಮಹಾಸಂಪೋಕ್ಷಣ, ಮಹಾಕುಂಭಾಭಿಷೇಕಗಳ ಮೂಲಕ ಶುದ್ಧೀಕರಣ ನಡೆಸಲಾಗುತ್ತದೆ. ಮಾರ್ಚ್ 3, 2026 ರಿಂದ ಮಾರ್ಚ್ 6, 2026 ರವರೆಗೆ ಉತ್ತರ ಮತ್ತು ದಕ್ಷಿಣ ರಾಜಗೋಪುರಗಳ ಲೋಕಾರ್ಪಣೆ, ಕಳಸಾರೋಹಣ ಹಾಗೂ ಮಹಾ ಕುಂಭಾಭಿಷೇಕ, ಲಕ್ಷ ದೀಪೋತ್ಸವ ಮತ್ತು ಕಷ್ಣಾರತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ ಮಕರ ಸಂಕ್ರಮಣ, ವಿಶಾಳಿ ಜಾತ್ರಾ ಕಾರ್ಯಕ್ರಮಗಳು ಕೂಡ ನೆರವೇರಲಿವೆ. ಜನವರಿ 14, 2026 ರಿಂದ ಬೆಳಗಾವಿ ಜಿಲ್ಲೆಯಾದ್ಯಂತ ಭಕ್ತರಿಗೆ ಲಿಂಗದೀಕ್ಷೆ ನೀಡುವ ‘ಸಂಚಾರಿ ಧರ್ಮ ಜಾಗತಿ ಯಾತ್ರೆ’ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಸಾಹೇಬ ಜೊಲ್ಲೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮುಖಂಡ ಜಗದೀಶ ಕವಟಗಿಮಠ ಜಿಪಂ ಮಾಜಿ ಸದಸ್ಯ ಮಹೇಶ್ ಭಾತೆ ಸುಭಾಸ ಕವಲಾಪುರೆ, ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಮೂಲಿನ ಮಠದ ಗುರುಸಿದ್ಧ ಸ್ವಾಮೀಜಿ, ಜೋಡಕುರಳಿಯ ಚಿನ್ಮಯಾನಂದ ಸ್ವಾಮೀಜಿ, ಗುಣದಾಳದ ವಿವೇಕಾನಂದ ದೇವರು, ಅನ್ನದಾನೇಶ್ವರ ಶಾಸಿಗಳು, ಯಡೂರಿನ ಶ್ರೀಶೈಲ ಶಾಸಿಗಳು, ದಿಗ್ಗೇವಾಡಿಯ ಕಾಡಯ್ಯ ಶಾಸ್ರಿಗಳು, ಶೆಟ್ಟರ ಮಠದ ಶ್ರೀಗಳು ತೆಲಸಂಗದ ವೀರೇಶ ದೇವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net