ಯಂತ್ರದ ಮೊರೆ ಹೋದ ಅನ್ನದಾತ

12ANKOLA1A
Published on

ವಿದ್ಯಾಧರ ಮೊರಬಾ ಅಂಕೋಲಾ

ತಾಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಹೀಗಾಗಿ, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಹಿಂದೆ ಜಾನುವಾರುಗಳ ಮೂಲಕ ಗದ್ದೆ ಉಳುಮೆ ಮಾಡುತ್ತಿದ್ದರು. ಆದರೆ, ಸಾಕಷ್ಟು ಸಮಯ ವ್ಯರ್ಥವಾಗುವುದರಿಂದ ರೈತರು ಪವರ್ ಟಿಲ್ಲರ್ ಯಂತ್ರದ ಮೊರೆ ಹೋಗಿದ್ದಾರೆ. ಅಲ್ಲದೆ, ಟ್ರ್ಯಾಕ್ಟರ್ ಮೂಲಕ ಗದ್ದೆ ಉಳುಮೆ ಮಾಡುತ್ತಿದ್ದಾರೆ.

ಟ್ರ್ಯಾಕ್ಟರ್​ಗೆ ಮೊರೆ: ರೈತರು ಈ ವರ್ಷ ವೇಗವಾಗಿ ಉಳುಮೆ ಮಾಡಲು ಟ್ರ್ಯಾಕ್ಟರ್​ಗಳ ಮೊರೆ ಹೋಗಿದ್ದಾರೆ. ಅವರು 1 ತಾಸಿಗೆ 1,100 ರೂ. ನಿಗದಿಪಡಿಸಿದ್ದಾರೆ. ಒಂದು ತಾಸಿಗೆ ಸುಮಾರು 30 ಗುಂಟೆಯಷ್ಟು ಜಾಗ ಉಳುಮೆ ಮಾಡುತ್ತದೆ. ಯಲ್ಲಾಪುರ ತಾಲೂಕಿನ ಕಿರವತ್ತಿಯಿಂದ ಅಂಕೋಲಾಕ್ಕೆ ಟ್ರ್ಯಾಕ್ಟರ್ ಬಾಡಿಗೆಗೆ ತರಲಾಗುತ್ತಿದೆ.

ಭತ್ತದ ಕೃಷಿ ಇಳಿಮುಖ: ಹಾಗಂತ, ತಾಲೂಕಿನಲ್ಲಿ 5,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೀಜ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಕೃಷಿ ಭೂಮಿಯು ನಿವೇಶನ ಹಾಗೂ ಇತರ ಉದ್ದೇಶಗಳಿಗಾಗಿ ಪರಿವರ್ತನೆಯಾಗಿದ್ದು, 4,700 ಹೆಕ್ಟೇರ್​ಗೆ ಇಳಿದಿದೆ. ಹೀಗಾಗಿ, ಪ್ರಸ್ತುತ ವರ್ಷ 800 ಹೆಕ್ಟೇರ್​ನಷ್ಟು ಭತ್ತ ಬೆಳೆಯುವ ಪ್ರಮಾಣ ತಗ್ಗಿದಂತಾಗಿದೆ.

ರೈತ ಸಂಪರ್ಕ ಕೇಂದ್ರ: ತಾಲೂಕಿನಲ್ಲಿ ಬಾಸಗೋಡ, ಬಳಲೆ, ಬೇಲೆಕೇರಿ, ಅಂಕೋಲಾ ಸೇರಿ 4 ರೈತ ಸಂಪರ್ಕ ಕೇಂದ್ರಗಳಿವೆ. ರೈತರಿಗೆ ಅಗತ್ಯವಿರುವ ಭತ್ತದ ತಳಿಗಳಾದ ಜಯಾ, ಎಂಟಿಯು 1001, ಎಂಒ 4, ಜೆಜಿಎಲ್ ಹಾಗೂ ಪಿಎಸಿ 837, ವಿಎನ್​ಆರ್ 2233 ಎಂಬ ಹೈಬ್ರಿಡ್ ತಳಿಯ ಬೀಜಗಳು ಹಾಗೂ ಗೊಬ್ಬರ ಕೂಡ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ.

ರೈತರಿಗೆ ಅಗತ್ಯವಿರುವ ಸೌಲಭ್ಯವನ್ನು ಕೃಷಿ ಇಲಾಖೆಯಿಂದ ನೀಡಲಾಗುತ್ತಿದೆ. ಯಾವುದೇ ರೋಗ- ರುಜಿನಗಳು ಬಂದರೆ ಸ್ಥಳ ಪರಿಶೀಲನೆ ನಡೆಸಿ ಅದಕ್ಕೆ ಪರಿಹಾರ ಸೂಚಿಸಲಾಗುವುದು. ರೈತರು ಭೂಮಿಯನ್ನು ಆದಷ್ಟು ಬಂಜರು ಬಿಡದೆ ಕೃಷಿಗೆ ಹೆಚ್ಚಿನ ಒಲವು ತೋರಬೇಕು.| ಶ್ರೀಧರ ನಾಯ್ಕ ಸಹಾಯಕ ಕೃಷಿ ನಿರ್ದೇಶಕ ಅಂಕೋಲಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net