ಮೌಲ್ಯವರ್ಧನೆಗೆ ವಿಶೇಷ ಆದ್ಯತೆ

3sirsi4
Published on

ಶಿರಸಿ: ರೈತ ಉತ್ಪಾದಕರ ಕಂಪನಿಗಳ ರಚನೆ, ವಿವಿಧ ಕಡೆ ಸುಪರ್ ಮಾರ್ಕೆಟ್ ವಿಸ್ತರಣೆ, ಸಾಮ್ರಾಟ್ ವಸತಿ ಗೃಹದ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕದಿಂದ ಹೆಸ್ಕಾಂಗೆ ವಿದ್ಯುತ್ ಮಾರಾಟ, ಸಿದ್ದಾಪುರ ಶಾಖೆ ವ್ಯಾಪಾರಿ ಅಂಗಳ ವಿಸ್ತರಣೆ ಸೇರಿ ಹಲವು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್​ಎಸ್) ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹೇಳಿದರು.

ನಗರದ ಟಿಎಸ್​ಎಸ್ ವ್ಯಾಪಾರಿ ಅಂಗಳದಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮಾರಾಟ ಮತ್ತಿತರ ಉದ್ದೇಶಕ್ಕಾಗಿ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳುವುದು, ಹಸಿ ಅಡಕೆ ಟೆಂಡರ್ ವ್ಯವಸ್ಥೆ ಹಾಗೂ ಹಸಿ ಅಡಕೆ ಖರೀದಿಸಿ ಸಂಸ್ಕರಣೆ ಮಾಡಿಕೊಡುವ ವ್ಯವಸ್ಥೆ ಕಲ್ಪಿಸುವುದು, ಅಡಕೆಯ ಮೌಲ್ಯವರ್ಧನೆಯಿಂದ ಉಪ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸುವುದು, ಜೋಳದಿಂದ ಉಪ ಉತ್ಪನ್ನಗಳನ್ನು ತಯಾರಿಸುವುದು, ಬಾಳೆಕಾಯಿ ಚಿಪ್ಸ್ ತಯಾರಿಕೆ ಘಟಕ ಮಾಡುವುದು, ಸಂಘದ ಮೂಲಕ ನೇರವಾಗಿ ಅಡಕೆ ವಹಿವಾಟು ನಡೆಸುವ ಎಲ್ಲ ವ್ಯಕ್ತಿ ಸದಸ್ಯರನ್ನು ರೈತ ಉತ್ಪಾದಕರ ಕಂಪನಿಗೆ ಸದಸ್ಯರನ್ನಾಗಿ ಮಾಡಿಕೊಳ್ಳುವ ಉದ್ದೇಶದೊಂದಿಗೆ ಫಾರ್ಮರ್ ಪೊ›ಡ್ಯೂಸರ್ ಕಂಪನಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.

ಸಂಘದ ಸುಪರ್ ಮಾರ್ಕೆಟ್​ನ ಜನಪ್ರಿಯತೆ ಹೆಚ್ಚುತ್ತಿದೆ. ಬೇರೆ ಬೇರೆ ಸ್ಥಳಗಳಲ್ಲಿ ಸಂಘದೊಂದಿಗೆ ಫ್ರಾಂಚೈಸಿ ಘಟಕ ಆರಂಭಿಸಲು ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಮುಧೋಳದಲ್ಲಿ ಎಂ.ಆರ್.ಎನ್. ಗ್ರೂಪ್, ಗದಗದಲ್ಲಿ ಕಾಟನ್ ಕೋ-ಆಪರೇಟಿವ್ ಸೊಸೈಟಿ ಸಹಯೋಗದಲ್ಲಿ ಸುಪರ್ ಮಾರ್ಕೆಟ್ ಆರಂಭಕ್ಕೆ ಒಪ್ಪಂದವಾಗಿದೆ. ಕೆಲವು ಪ್ರಾಥಮಿಕ ಸಹಕಾರಿ ಸಂಘಗಳಲ್ಲೂ ಸಣ್ಣ ಪ್ರಮಾಣದ ಸುಪರ್ ಮಾರ್ಕೆಟ್ ಹಾಗೂ ಕೃಷಿ ವಿಭಾಗ ಫ್ರಾಂಚೈಸಿ ಮಾದರಿಯಲ್ಲಿ ನಡೆಸುವ ಬಗ್ಗೆ ಕೂಡ ಆಲೋಚನೆ ನಡೆದಿದೆ. ಈಗಾಗಲೇ ಸಾಲ್ಕಣಿ ಸೇವಾ ಸಹಕಾರಿ ಸಂಘ ಹಾಗೂ ಹುಲೇಕಲ್ ಸೇವಾ ಸಹಕಾರಿ ಸಂಘಗಳಲ್ಲಿ ಸುಪರ್ ಮಾರ್ಕೆಟ್ ಮಾಡುವ ಬಗ್ಗೆ ಒಡಂಬಡಿಕೆಯಾಗಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ, ಸದಸ್ಯರ ಅಗತ್ಯಗಳನ್ನು ಅರಿತು ಅವರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಅನೇಕ ಸದಸ್ಯಪರ ಹಾಗೂ ವಿನೂತನ ಯೋಜನೆಗಳನ್ನು ಹಾಗೂ ಸೇವೆಗಳನ್ನು ಸಂಘವು ಪರಿಚಯಿಸುತ್ತಿದೆ.

ಟಿಎಸ್​ಎಸ್ ಸದಸ್ಯರ ರಕ್ಷಾ ಕವಚ ಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ. ಟಿಎಸ್​ಎಸ್ ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಮಾತ್ರ ಸೀಮಿತವಾಗಿದ್ದ ಯೋಜನೆಯ ಸೌಲಭ್ಯವನ್ನು ಎಲ್ಲ ಆಸ್ಪತ್ರೆಗಳಿಗೂ ವಿಸ್ತರಿಸಲಾಗಿದೆ. ಸದಸ್ಯರ ಕುಟುಂಬದ ಎಲ್ಲರಿಗೂ ವೈದ್ಯಕೀಯ ವೆಚ್ಚದ ಶೇ.100ರಷ್ಟು ಆರ್ಥಿಕ ನೆರವು ದೊರಕಿಸುವ ಯೋಚನೆ ಹೊಂದಲಾಗಿದೆ ಎಂದರು.

ಕಾಳುಮೆಣಸಿನ ಕೊಳೆರೋಗ ಹಾಗೂ ಅಡಕೆ ತೋಟದ ಬೇರುಹುಳು ಬಾಧೆಗೆ ರಾಮಬಾಣವೆನಿಸಿರುವ ಟ್ರೖೆಕೋಡರ್ವ ಅಣುಜೀವಿ ಗೊಬ್ಬರ ತಯಾರಿಕೆ ಪ್ರಯೋಗಾಲಯವನ್ನು 12 ಲಕ್ಷ ರೂ. ವೆಚ್ಚದಲ್ಲಿ ಸಂಘದಲ್ಲಿ ಆರಂಭಿಸಲಾಗಿದೆ ಎಂದು ಹೇಳಿದರು.

ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್. ಹೆಗಡೆ ಕುಂದರಗಿ ಅವರನ್ನು ಸನ್ಮಾನಿಸಲಾಯಿತು. ಜತೆ, 2019-20ನೇ ಸಾಲಿನಲ್ಲಿ ಸಂಪೂರ್ಣವಾಗಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ವಿಕ್ರಿ ಮಾಡಿದ 46 ಸಹಕಾರಿ ಸಂಘಗಳಿಗೆ ಬಹುಮಾನ ನೀಡಲಾಯಿತು.

ಸಂಘದ ಅಧ್ಯಕ್ಷ ಶಾಂತಾರಾಮ ಹೆಗಡೆ, ನಿರ್ದೇಶಕರಾದ ಚಂದ್ರಶೇಖರ ಹೆಗಡೆ, ಸೀತಾರಾಮ ಹೆಗಡೆ ನೀರ್ನಳ್ಳಿ, ಗಣಪತಿ ರಾಯ್ಸದ್, ಕೆ.ಎಂ.ಹೆಗಡೆ, ಶಶಾಂಕ ಹೆಗಡೆ, ಇತರರು ಇದ್ದರು.

ಸಂಘದ ಸದಸ್ಯರ ರಕ್ಷಾಕವಚ ಮೂಲಕ ವೈದ್ಯಕೀಯ ವೆಚ್ಚ ನಿರ್ವಹಣೆ ಸಲುವಾಗಿ ಆರಂಭಿಸಿದ್ದ ಕೃಷಿ ಕಾರ್ವಿುಕರ ಅವಘಡ ಪರಿಹಾರ ಯೋಜನೆ ಹಾಗೂ ಆರೋಗ್ಯ ಸುರಕ್ಷಾ ಯೋಜನೆಗಳನ್ನು ವಿಲೀನಗೊಳಿಸಿ ಟಿಎಸ್​ಎಸ್ ಸದಸ್ಯರ ರಕ್ಷಾ ಕವಚ ಎಂಬ ನೂತನ ಯೋಜನೆಯನ್ನು ಆರಂಭಿಸಲಾಗಿದೆ.| ರಾಮಕೃಷ್ಣ ಹೆಗಡೆ ಕಡವೆ ಟಿಎಸ್​ಎಸ್ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net