

ಮಳವಳ್ಳಿ: ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕಲಿತ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗುರುಕುಲ ಪರಂಪರೆಯನ್ನು ಹೊಂದಿರುವ ನಮ್ಮ ನಾಡಿನ ಸಾಂಸ್ಕೃತಿಕ ಸೊಗಡನ್ನು ಮರುಕಳಿಸುವಂತೆ ಮಾಡಿದ್ದಾರೆ ಎಂದು ಹೊಸಹಳ್ಳಿ ಸಿದ್ದಮಲ್ಲೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಓಂಕಾರೇಶ್ವರ ಸ್ವಾಮೀಜಿ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ, ಸ್ನೇಹ ಸಮ್ಮಿಲನ ಹಾಗೂ ಶಾಲೆಯ ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರು ಎಂಬ ಪದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಪೂಜ್ಯ ಭಾವನೆ ಇದೆ. ಅಂದಿನ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಗುರು-ಹಿರಿಯರಿಗೆ ಗೌರವಿಸುವುದರ ಬಗ್ಗೆ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ಅಂತಹ ಕಲಿಕಾ ಕ್ರಮಗಳು ನಮ್ಮ ಸರ್ಕಾರಿ ಶಾಲೆಗಳಲ್ಲಿ ನಮ್ಮ ಕಾಲಘಟ್ಟದವರಿಗೆ ದೊರೆತಿದ್ದು ಅದರ ಹೂರಣವೇ ಇಂದು ತಮಗೆ ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸಿಕೊಂಡು ಹಿರಿಯ ವಿದ್ಯಾರ್ಥಿಗಳು ಸಮಾಗಮ ಮಾಡಿಸುವ ಸಮಾರಂಭ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇತ್ತೀಚಿನ ಶಿಕ್ಷಣ ವ್ಯವಸ್ಥೆಯಲ್ಲಿ ಗುರು, ಹಿರಿಯರನ್ನು ಗೌರವಿಸುವ ವಿಚಾರವಾಗಿ ಮಕ್ಕಳಲ್ಲಿ ಅರಿವಿನ ಕೊರತೆ ಕಾಣತೊಡಗಿದೆ. ಇದು ಸಮಾಜಕ್ಕೆ ಮಾರಕವಾಗಲಿದ್ದು ಶೈಕ್ಷಣಿಕ ತಜ್ಞರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ಶಾಲೆಗಳಲ್ಲಿ ಗುರು ಮತ್ತು ಪಾಲಕರ ಬಗ್ಗೆ ಗೌರವ ಕೊಡುವ ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಸಲಹೆ ನೀಡಿದರು.
ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಯಾವುದೆ ವ್ಯಕ್ತಿ ತನ್ನ ಜೀವಿತ ಅವಧಿಯಲ್ಲಿ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡುವ ಮೂಲಕ ಸ್ಮರಣೀಯರಾಗಬೇಕು. ಅಂತಹ ಸ್ಮರಣೀಯ ಹಾಗೂ ಜನ ಮಾನಸದಲ್ಲಿ ಉಳಿದುಕೊಳ್ಳುವ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ. ಇಲ್ಲಿನ ಮುಖ್ಯಶಿಕ್ಷಕಿ ಬಿ.ಪ್ರತಿಮಾ ಅವರು ಬಡ್ತಿ ದೊರೆತರೂ ಪಡೆದುಕೊಳ್ಳದೆ ಇದೇ ಶಾಲೆಯಲ್ಲಿ 25 ವರ್ಷಗಳಿಂದ ಇಲ್ಲಿನ ಗ್ರಾಮೀಣ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಮೂಲಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ವೃತ್ತಿಯಲ್ಲಿರುವ 25 ಶಿಕ್ಷಕರನ್ನು ಸನ್ಮಾನಿಸಲಾಯಹಿತು. ಎಲ್ಲರಿಗೂ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶಿಕ್ಷಕರನ್ನು ಪೂರ್ಣಕುಂಭ, ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಶ್ರೀ ಶಿವಜ್ಯೋತಿ ಸ್ವಾಮೀಜಿ, ಮುಖ್ಯಶಿಕ್ಷಕಿ ಪ್ರತಿಭಾ, ಎಸ್‌ಡಿಎಂಸಿ ಅಧ್ಯಕ್ಷ ಮಹದೇವಸ್ವಾಮಿ, ನಿವೃತ್ತ ಉಪನ್ಯಾಸಕ ಚಿಕ್ಕಸ್ವಾಮಿ, ಶಿಕ್ಷಣ ಪ್ರೇಮಿ ಮಧುಗಂಗಾಧರ್, ಶ್ರೀನಿವಾಸಮೂರ್ತಿ, ಕಾರ್ಯಕ್ರಮ ಆಯೋಜಕರಾದ ತಿಮ್ಮೇಗೌಡ, ಮಂಜುನಾಥಸ್ವಾಮಿ, ಗುರುಪ್ರಸಾದ್, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.