

ಹಲಗೂರು: ವಿದ್ಯಾರ್ಥಿಗಳು ಭವಿಷ್ಯದ ವಿಜ್ಞಾನಿಗಳು. ಇಂದಿನಿಂದಲೇ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು ಅಜ್ಞಾನ, ಅಂಧಕಾರ, ಮೌಢ್ಯತೆ ತೊಲಗಿ ಎಲ್ಲದರಲ್ಲೂ ವೈಜ್ಞಾನಿಕ ಮನೋಭಾವನೆ, ಚಿಂತನೆ ಹೊಂದಬೇಕು ಎಂದು ಹಲಗೂರು ವೃತ್ತದ ಶಿಕ್ಷಣ ಸಂಯೋಜಕ ರವಿಕುಮಾರ್ ತಿಳಿಸಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹಲಗೂರು ಹೋಬಳಿಯ ವಿವಿಧ ಶಾಲೆಗಳಿಂದ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜ್ಞಾನದಲ್ಲಿ ನಾವು ಎಷ್ಟು ಮುಂದುವರಿದಿದ್ದೇವೋ ಅಷ್ಟೇ ಅಂಧಕಾರದಲ್ಲಿದ್ದೇವೆ. ಶಾಲೆಗಳಿಗೆ ಹೋಗಿ ಜ್ಞಾನ ಬೆಳೆಸಿಕೊಳ್ಳುವುದರ ಬದಲು ಜ್ಯೋತಿಷ, ಪುರೋಹಿತ, ಮಂತ್ರವಾದಿ, ತಂತ್ರವಾದಿಗಳ ಮನೆ ಬಾಗಿಲಿಗೆ ಹೆಚ್ಚು ಹೋಗುತ್ತಿದ್ದೇವೆ. ಅಂತವರಿಗೆ ಲಾಭ ಮಾಡಿಕೊಡುವುದರ ಜತೆಗೆ ಶೋಷಣೆಗೆ ಒಳಗಾಗುತ್ತಿದ್ದೇವೆ. ಜನರಲ್ಲಿ ಮೌಢ್ಯತೆ, ಅಂಧಕಾರ, ಅಜ್ಞಾನವನ್ನು ತುಂಬುತ್ತಿದ್ದಾರೆ. ನಮ್ಮಲ್ಲಿ ನಂಬಿಕೆ ಇರಬೇಕು, ಮೂಢನಂಬಿಕೆ ಇರಬಾರದು. ಮೌಢ್ಯತೆ ಬಿಟ್ಟು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಎ.ಎಸ್.ನಾಗೇಶ್ ಮಾತನಾಡಿ, ವಿಜ್ಞಾನವಿಲ್ಲದೆ ಬದುಕಿಲ್ಲ. ವಿಜ್ಞಾನವಿಲ್ಲದೆ ಯಾವುದೇ ಅಭಿವೃದ್ಧಿ ಇಲ್ಲ. ವಿಜ್ಞಾನಿ ಸಿ.ವಿ. ರಾಮನ್ ಅವರಿಗೆ ನೊಬೆಲ್ ಪಾರಿತೋಷಕ ಸಿಕ್ಕ ನೆನಪಿಗಾಗಿ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ಮಂಡಳಿ ವಿಜ್ಞಾನದ ದಿನವಾಗಿ ಆಚರಿಸುತ್ತಿದೆ. ವಿಜ್ಞಾನದಿಂದ ಪ್ರತಿಯೊಬ್ಬರ ಬದುಕು ಅಭಿವೃದ್ಧಿಯತ್ತ ಸಾಗಲಿ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸಾಚಾರಿ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಮೊಬೈಲ್ ಬಳಕೆಗೆ ಆದ್ಯತೆ ನೀಡದೆ ವ್ಯಾಸಂಗದತ್ತ ಗಮನ ನೀಡಬೇಕು ಎಂದು ಹೇಳಿದರು.
ವಿವಿಧ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ವಸ್ತು ಪ್ರದರ್ಶನವನ್ನು ಗಣ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ಮಹಾದೇವ, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಲತಾ ಮಾದೇವ, ಡಾ. ಎಚ್.ಎಸ್.ಪದ್ಮಾವತಿ ನಾಗೇಶ್, ಶ್ರೀನಿವಾಸಾಚಾರಿ, ಮುಖ್ಯ ಶಿಕ್ಷಕರಾದ ಕುಳ್ಳಯ್ಯ, ಶಿಕ್ಷಕರಾದ ಸುಂದರಪ್ಪ, ಜಿ.ಎಸ್.ಕೃಷ್ಣ, ಪುಟ್ಟರಾಜು, ಈಶ, ಸಿದ್ದಪ್ಪ, ಬೋರೇಗೌಡ, ತಿಮ್ಮಯ್ಯ, ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.