

ಬ್ಯಾಡಗಿ: ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಕಾರ್ಯಕರ್ತರು ತಾಲೂಕಿನ ಮೋಟೆಬೆನ್ನೂರು ಗ್ರಾಮದ ಸರ್ವಿಸ್ ರಸ್ತೆ ಬಳಿ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಲಮಾಣಿ ಮಾತನಾಡಿ, ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ವಾಪಸ್ ಪಡೆದಿದೆ. ಅದೇ ರೀತಿ ರಾಜ್ಯ ಸರ್ಕಾರವೂ ವಾಪಸ್ ಪಡೆಯಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಬಿಡುಗಡೆ ಹಾಗೂ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದರು.
ಸಂಘದ ಸಂಜೀವ ಮಡಿವಾಳರ ಮಾತನಾಡಿ, ರಾಜ್ಯದಲ್ಲಿ 2 ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ರೈತರು ಕೃಷಿ ಕಾರ್ಯ ಮಾಡುತ್ತಿದ್ದಾರೆ. ಅವರಿಗೆಲ್ಲ ಸರ್ಕಾರ ಬೇಗ ಹಕ್ಕುಪತ್ರ ನೀಡಬೇಕು. ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಸಿಲಿಂಡರ್ ವಿತರಿಸಬೇಕು. ವಿಧವಾ, ವೃದ್ಧಾಪ್ಯ ವೇತನವನ್ನು 3 ಸಾವಿರ ರೂಪಾಯಿಗೆ ಏರಿಕೆ ಮಾಡಬೇಕು. ಮೋಟೆಬೆನ್ನೂರು, ಅರಬಗೊಂಡ, ಅಳಲಗೇರಿ ಗ್ರಾಮಗಳ ಫಲವತ್ತಾದ ಕೃಷಿ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಸಂಚಾಲಕ ಹನುಮಂತಪ್ಪ ದಿವೀಗಿಹಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಚಂದ್ರಶೇಖರ ಉಪ್ಪಿನ, ರೈತ ಸಂಘದ ತಾಲೂಕಾಧ್ಯಕ್ಷ ಶಿವಯೋಗಿ ಗಡಾದ, ಶಿವಾನಂದ ಹೊಸಮನಿ, ವಕೀಲ ಬಸವರಾಜ ಬಳ್ಳಾರಿ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ ಹಿರೇಮಠ, ಮಲ್ಲಮ್ಮ ಹುಲ್ಲಿನಕೊಪ್ಪ, ಕುಸುಮಾ ಆಸಾದಿ, ಲೋಕೇಶ ಕಡೇಮನಿ, ಕುದರಾಳ ಸುರೇಶಣ್ಣ, ಬಸವರಾಜ ಕೋಡಿಹಳ್ಳಿ, ಚಂದ್ರಣ್ಣ ಉಪ್ಪಿನ ಇದ್ದರು.