

ಹನೂರು: ಪಕ್ಷಿಗಳ ಆವಾಸ ಸ್ಥಾನದ ಸಂರಕ್ಷಣೆ ಹಾಗೂ ಸಂಶೋಧನೆಗೆ ಪಕ್ಷಿ ಗಣತಿ ಸಹಕಾರಿಯಾಗಲಿದೆ ಎಂದು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಕೈಗೊಂಡಿರುವ ಪಕ್ಷಿ ಗಣತಿ ಕಾರ್ಯದಲ್ಲಿ ಭಾನುವಾರ ಭಾಗಿಯಾಗಿ ಮಾತನಾಡಿದರು.
ಪರಿಸರದಲ್ಲಿ ಹಲವು ಪಕ್ಷಿಗಳು ಕಾಣಸಿಗುವುದು ಸಾಮಾನ್ಯ. ಆದರೆ ಅಪರೂಪ ಹಾಗೂ ವಿಶೇಷ, ವಿವಿಧ ಜಾತಿಯ ಪಕ್ಷಿಗಳು ಗೋಚರಿಸುವುದಿಲ್ಲ. ಈ ಪಕ್ಷಿಗಳು ಅರಣ್ಯ ಹಾಗೂ ನೀರಿನ ಆಸರೆಯಿರುವ ಪ್ರದೇಶದಲ್ಲಿ ಕಂಡು ಬರುತ್ತವೆ. ಸಹಜವಾಗಿ ಕೀಟಗಳು, ಜೇಡಗಳನ್ನು ಆಹಾರವಾಗಿ ಅವಲಂಬಿಸಿರುತ್ತವೆ. ಈ ಹಿಂದೆ ಕೆಲವು ವಿಶೇಷ ಪಕ್ಷಿಗಳು ಸಹ ಸಾಮಾನ್ಯ ಪರಿಸರದಲ್ಲಿ ಕಂಡು ಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮನುಷ್ಯ ಗಿಡಮರಗಳನ್ನು ಕಡಿದು ಕಟ್ಟಡವನ್ನು ನಿರ್ಮಿಸಿರುವುದರ ಮೂಲಕ ಸಿಮೆಂಟ್ ಮಯವಾಗಿಸಿದ್ದಾರೆ. ಇದರಿಂದ ಪಕ್ಷಿಗಳಿಗೆ ಆಸರೆ ಇಲ್ಲದಂತಾಗಿದ್ದು, ಅರಣ್ಯ ಪ್ರದೇಶವನ್ನು ಹೆಚ್ಚಾಗಿ ಅವಲಂಬಿಸುವಂತಾಗಿವೆ. ಮೊಬೈಲ್ ರೆಡಿಯೇಷನ್, ನೆಟ್‌ವರ್ಕ್ ಟವರ್ ಸ್ಥಾಪನೆಯಿಂದಾಗಿ ಪಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಆದ್ದರಿಂದ ಯುವ ಪೀಳಿಗೆಗೆ ಪಕ್ಷಿ ಸಂತತಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಪರಿಸರ ಸಮತೋಲನಕ್ಕೂ ಸಹಕಾರಿಯಾಗಿದೆ. ಈ ದೆಸೆಯಲ್ಲಿ ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಪಕ್ಷಿ ಗಣತಿಯನ್ನು ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಶೋಧನೆಗೆ ಸಹಕಾರಿ: ಅರಣ್ಯ ಪ್ರದೇಶಗಳಿಗೆ ಪ್ರತಿ ವರ್ಷ ಋತುಮಾನಕ್ಕೆ ಅನುಗುಣವಾಗಿ ಪಕ್ಷಿಗಳು ವಲಸೆ ಬರುತ್ತವೆ. ಜತೆಗೆ ವರ್ಷದಿಂದ ವರ್ಷಕ್ಕೆ ಪಕ್ಷಿಗಳ ಸಂಖ್ಯೆ ಏರಿಳಿತವಾಗುತ್ತದೆ. ಪಕ್ಷಿಗಳ ಲೋಕದಲ್ಲಿ ಬದಲಾವಣೆಯಾಗುತ್ತಿರುತ್ತದೆ. ಆದರೆ ಈ ಬಗ್ಗೆ ತಿಳಿಯುವುದಿಲ್ಲ. ಹಾಗಾಗಿ ಕೈಗೊಂಡಿರುವ ಪಕ್ಷಿ ಗಣತಿ ಇವೆಲ್ಲದಕ್ಕೂ ಸಹಕಾರಿಯಾಗಿದೆ. ಜತೆಗೆ ಪಕ್ಷಿಗಳ ಅವಾಸ ಸ್ಥಾನವನ್ನು ಗುರ್ತಿಸಿ ರಕ್ಷಿಸಲು ಹಾಗೂ ಸಂಶೋಧನೆಗೂ ಸಹಕಾರಿಯಾಗಲಿದೆ. ಇದರಿಂದ ಹೊಸ ಪ್ರಬೇಧಗಳನ್ನು ಪರಿಚಯಿಸಲು ನೆರವಾಗಲಿದೆ. ಇದರಿಂದ ಅರಣ್ಯ ಪ್ರದೇಶದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಬಳಿಕ ಶ್ರೀಗಳು ಎಸಿಎಫ್ ಸ್ವಪ್ನಿಲ್ ಮನೋಹರ್ ಆಹಿರೆ ಅವರಿಂದ ಅರಣ್ಯ ಹಾಗೂ ಪಕ್ಷಿ ಗಣತಿ ಬಗ್ಗೆ ಮಾಹಿತಿ ಪಡೆದರು. ಪಕ್ಷಿಗಳನ್ನು ವೀಕ್ಷಿಸಿ ಸ್ವ ಅನುಭವ ಪಡೆದರು.