ಮೊದಲನೇ ತರಗತಿ ಪ್ರವೇಶ ಸಾವಿರ ರೂ. ಠೇವಣಿ

bkt-30-12
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಸರ್ಕಾರಿ ಮಾದರಿ ಶಾಲೆಯಲ್ಲಿ ಶುಕ್ರವಾರ ಅಕ್ಷರ ತೇರು ಮಾಡಿ ಅದನ್ನು ಮಕ್ಕಳಿಂದ ಎಳೆಸುವ ಮೂಲಕ ಶಾಲಾ ಪ್ರಾರಂಭೋತ್ಸವ ಆಚರಿಸಿದರು.
Published on

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಸರ್ಕಾರಿ ಮಾದರಿ ಶಾಲೆಯಲ್ಲಿ ಮಕ್ಕಳ ಪ್ರವೇಶಾತಿ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ ಮೊದಲನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಹೆಸರಿನಲ್ಲಿ ಒಂದು ಸಾವಿರ ರೂ. ಠೇವಣಿ ಇಡುವ ವಿನೂತನ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ.

ಪ್ರವೇಶ ಪಡೆಯುವ ಪ್ರತಿ ವಿದ್ಯಾರ್ಥಿ ಹೆಸರಿನಲ್ಲಿ ಗ್ರಾಮದ ಅಂಚೆ ಕಚೇರಿಯಲ್ಲಿ ಒಂದು ಸಾವಿರ ರೂ.ಗಳನ್ನು ಠೇವಣಿ ಇಟ್ಟು ಆ ಮಗು ೧೮ ವರ್ಷವಾದ ಬಳಿಕ ಠೇವಣಿ ಹಣ ಪಡೆಯುವ ಯೋಜನೆ ಇದಾಗಿದೆ. ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲು ಎಸ್‌ಡಿಎಂಸಿ ಸದಸ್ಯರು, ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಶಾಲಾ ಮುಖ್ಯಶಿಕ್ಷಕ ರಾಜೇಶ ಮನಗೂಳಿ ಅವರು ಶುಕ್ರವಾರ ಶಾಲಾ ಪ್ರಾರಂಭೋತ್ಸವ ನಿಮಿತ್ಯ ಎಸ್‌ಡಿಎಂಸಿ ಹಾಗೂ ಹಳೇ ವಿದ್ಯಾರ್ಥಿಗಳು ಸಭೆ ಕರೆದಿದ್ದರು. ಸಭೆಯಲ್ಲಿ ಗ್ರಾಮದ ಸರ್ಕಾರಿ ಶಾಲೆಗೆ ಮಕ್ಕಳ ಪ್ರವೇಶಾತಿ ಹೆಚ್ಚಿಸಲು ಈ ಠೇವಣಿ ವಿಧಾನವನ್ನು ಗಮನಕ್ಕೆ ತರುತ್ತಿದ್ದಂತೆ ಅದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿ ಠೇವಣಿ ಹಣ ಕೊಡಲು ಸಿದ್ದ ಎಂದು ತಮ್ಮ ಒಪ್ಪಿಗೆ ಸೂಚಿಸಿದರು.

ಮೊದಲ ದಿನ ೮ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು, ಇದರಲ್ಲಿ ಈಗಾಗಲೇ ೭ ವಿದ್ಯಾರ್ಥಿಗಳ ಹೆಸರಿನಲ್ಲಿ ತಲಾ ಒಂದು ಸಾವಿರ ರೂ.ಗಳನ್ನು ಠೇವಣಿ ಇಡಲಾಗಿದೆ. ಪ್ರಸಕ್ತ ವರ್ಷ ಅಂಗನವಾಡಿ ಮಕ್ಕಳ ಹಾಜರಾತಿ ಗಮಿಸಿದರೆ ನಮ್ಮ ಶಾಲೆಗೆ ೪೦ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಾಧ್ಯತೆ ಇದ್ದು, ಅವರಿಗೆಲ್ಲ ಠೇವಣಿ ಇಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜೇಶ ಮನಗೂಳಿ ಅವರು ತಿಳಿಸಿದರು.

ಕೆರಕಲಮಟ್ಟಿ ಗ್ರಾಮದ ಸರ್ಕಾರಿ ಮಾದರಿ ಶಾಲೆಯಲ್ಲಿ ೧ ರಿಂದ ೭ನೇ ತರಗತಿ ಇದ್ದು, ಮಕ್ಕಳ ಸಂಖ್ಯೆ ೨೩೭ ಇದೆ. ೧೩ ಕೊಠಡಿಗಳು ಇದ್ದು, ಎರಡು ಕೊಠಡಿ ತೆರವು ಗೊಳಿಸಿ, ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲಾಗಿತ್ತಿದೆ. ಮಳೆಗಾಲದಲ್ಲಿ ಸೋರುತ್ತಿದ್ದ ಎರಡು ಕೊಠಡಿಗಳನ್ನು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ದುರಸ್ತಿ ಮಾಡಿಸಿದ್ದಾರೆ. ಇನ್ನು ಹಿಂದಿನ ವರ್ಷ ಶಾಲೆಯ ಹಳೇ ವಿದ್ಯಾರ್ಥಿಗಳು ಸೇರಿಕೊಂಡು ೨.೨೦ ಲಕ್ಷ ರೂ. ಖರ್ಚು ಮಾಡಿ ಕೊಠಡಿಗಳ ಗೋಡೆಯನ್ನು ರೈಲ್ವೆ, ಬಸ್ ಚಿತ್ರ ಹಾಗೂ ಕಂಪೌAಡ್ ಮೇಲೆ ಶೈಕ್ಷಣಿಕ ಚಿತ್ರಗಳನ್ನು ಬಣ್ಣದಲ್ಲಿ ಮಾಡಿಸಿದ್ದಾರೆ. ಹೀಗಾಗಿ ಶಾಲೆಯ ಅಭಿವೃದ್ಧಿಗಾಗಿ ಹಳೇ ವಿದ್ಯಾರ್ಥಿಗಳು ತನು-ಮನ-ಧನದಿಂದ ನೆರವಾಗಲು ಸಿದ್ದರಿದ್ದಾರೆ ಎಂದು ರಾಜೇಶ ಮನಗೂಳಿ ಹೇಳಿದರು.

ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭೊತ್ಸವನ್ನು ಶುಕ್ರವಾರ ಶಾಲೆಯಲ್ಲಿ ವಿಭಿನ್ನವಾಗಿ ಮಾಡಲಾಯಿತು. ಸಕ್ಷರದ ತೇರು ನಿರ್ಮಾಣ ಮಾಡಿ, ಅದನ್ನು ಮಕ್ಕಳ ಕೈಯಲ್ಲಿ ಎಳೆಸುವ ಮೂಲಕ ಚಾಲನೆ ನೀಡಿದರು. ಮಕ್ಕಳು ಖುಷಿಯಿಂದ ಅಕ್ಷರದ ತೇರು ಎಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net