

ವಿಜಯವಾಣಿ ಸುದ್ದಿಜಾಲ ಕಾರವಾರ
ಭಾರತದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮವು 1957 ರಲ್ಲಿ ಸಿಪಾಯಿ ದಂಗೆಯ ಮೂಲಕ ನಡೆಯಿತು ಎಂದು ಓದಿದ್ದೇವೆ. ಆದರೆ, ಅದಕ್ಕೂ ಪೂರ್ವದಲ್ಲೇ ಬ್ರಿಟಿಷರ ವಿರುದ್ಧ ಸಿಡಿದೆದ್ದು, ಅವರ ಧ್ವಜವನ್ನು ಇಳಿಸಿ ಓಡಿಸುವ ಕಾರ್ಯ ಉತ್ತರ ಕನ್ನಡದಲ್ಲಿ ನಡೆದಿತ್ತು ಎನ್ನುತ್ತಾರೆ ಇತಿಹಾಸಕಾರರು. ಅದನ್ನೇ ಇಟ್ಟುಕೊಂಡು ಬಿಜೆಪಿ ಕಾರವಾರದ ಕಡವಾಡ ಗ್ರಾಮದ ನಂದವಾಳ ಎಂಬಲ್ಲಿ ವಿಜಯೋತ್ಸವ ಆಚರಿಸುತ್ತಿದೆ. ಉತ್ತರ ಕನ್ನಡ ಕಾಳು ಮೆಣಸಿಗೆ ಪ್ರಸಿದ್ಧವಾಗಿತ್ತು. ಸಮುದ್ರದ ಮೂಲಕ ವ್ಯಾಪಾರಕ್ಕೆ ಬಂದ ಬ್ರಿಟಿಷರು ಕಾರವಾರದ ನಂದವಾಳದಲ್ಲಿ ಗೋಡೌನ್ ನಿರ್ಮಾಣ ಮಾಡಿದ್ದರು. ಸಂಸ್ಕರಣಾ ಕಾರ್ಖಾನೆಯನ್ನು ನಿರ್ಮಿಸಿದ್ದರು. 1725 ರಲ್ಲಿ ಆಗಿನ ಈ ಭಾಗದ ಪಾಳೆಗಾರ ಸೋದೆ ಸದಾಶಿವರಾಯರು ನಂದವಾಳದಲ್ಲಿದ್ದ ಬ್ರಿಟಿರು ಕಟ್ಟಿದ್ದ ಕಾರ್ಖಾನೆಯನ್ನು ಮುಚ್ಚಿಸಿದರು.ಅವರ ಧ್ವಜವನ್ನು ಫೆ.26 ಇಳಿಸಿದ್ದರು. ಮೂರು ಬಾರಿ ಬ್ರಿಟಿಷರನ್ನು ಇಲ್ಲಿಂದ ಹೊಡೆದು ಓಡಿಸಿದ ಬಗ್ಗೆ ಹಲವು ದಾಖಲೆಗಳು ಲಭ್ಯವಾಗಿವೆ. ಅದನ್ನು ಆಧರಿಸಿ ಬಿಜೆಪಿ ನಂದವಾಳದಲ್ಲಿ ಭಾನುವಾರ ವಿಜಯೋತ್ಸವ ಆಚರಿಸಿತು.
ಉಪನ್ಯಾಸಕ ಆದರ್ಶ ಗೋಖಲೆ ಮಾತನಾಡಿ, ಸೋದೆ ಸದಾಶಿವರಾಯರು ವೀರ ಸೇನಾನಿ ಮಾತ್ರನಾಗಿರಲಿಲ್ಲ. ಆತ ಶ್ರೇಷ್ಠ ಕವಿ, ಅನುವಾದಕಾರನಾಗಿದ್ದರು. ಏಳು ಭಾಷೆಗಳನ್ನು ಬಲ್ಲವನಾಗಿದ್ದ. ಸಂಸ್ಕೃತದಿಂದ ಕನ್ನಡಕ್ಕೆ ಕೃತಿಗಳನ್ನು ಅನುವಾದ ಮಾಡಿದ್ದರು. 17ಕೃತಿಗಳನ್ನು ರಚಿಸಿದ್ದರು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಮ್ಮ ನಡುವೆ ಇರುವ ರಾಷ್ಟ್ರ ವಿರೋಧಿ ಮಾನಸಿಕತೆಯನ್ನು ಗುರುತು ಹಿಡಿಯಬೇಕಾಗಿದೆ, ಸ್ವಾತಂತ್ರ‍್ಯ ಬಂದು 75 ವರ್ಷಗಳ ನಂತರವೂ 'ಭಾರತ ಮಾತಾಕಿ ಜೈ' ಎನ್ನಲು ಕೆಲವರು ಅನುಮಾನ ಮಾಡುವುದನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಇದೇ ನೆಲದ ಅನ್ನ ತಿಂದವರು ಕುಕ್ಕರ್ ನಲ್ಲಿ ಬಡವರ ಮಕ್ಕಳ ಶಾಲೆಯ ಎದುರು ಬಾಂಬ್ ಇಡಲು ಮುಂದಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ಅಂಥ ದುಷ್ಕೃತ್ಯವನ್ನು ಟಿವಿ ಸ್ಟುಡಿಯೋಗಳಲ್ಲಿ ಕುಳಿತು ಸಮರ್ಥನೆ ಮಾಡುವವರೂ ಇರುವಂಥ ದಿನದಲ್ಲಿ ಸೋದೆ ಸದಾಶಿವರಾಯರಂಥ ದೇಶಭಕ್ತರು ನಮ ಮಕ್ಕಳಿಗೆ ಮಾದರಿಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ದೇಶದ ವಿಚಾರ ಬಂದಾಗ ರಾಜಕಾರಣ ಬದಿಗಿಡಬೇಕು. ನಾವೆಲ್ಲ ಒಂದು ಎಂದು ಒಗ್ಗಟ್ಟಿನಿಂದ ಸಾಗಬೇಕು. ಸೋದೆ ಸದಾಶಿವರಾಯರ ಹೆಸರು ರಾಷ್ಟ್ರಮಟ್ಟದಲ್ಲಿ ಜನಜನಿತವಾಗಬೇಕು ಎಂದರು.
ಎಂಎಲ್‌ಸಿ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ಸ್ಥಾಯಿ ಸಮಿತಿ ಚೇರ್ಮನ್ ಸುಜಾತಾ ತಾಮಸೆ, ಬಿಜೆಪಿ ವಿಭಾಗೀಯ ಸಂಚಾಲಕ ಎನ್.ಎಸ್.ಹೆಗಡೆ, ಕಡವಾಡ ಗ್ರಾಪಂ ಅಧ್ಯಕ್ಷೆ ಪ್ರಿಯಾ ಗೌಡ, ಉಪಾಧ್ಯಕ್ಷ ಆನಂದು ನಾಯ್ಕ, ಬಿಜೆಪಿ ಪ್ರಮುಖರಾದ ರಾಜೇಂದ್ರ ನಾಯ್ಕ, ರಾಜೇಶ ನಾಯ್ಕ, ಸಂಜು ನಾಯ್ಕ,ಉದಯ ಬಶೆಟ್ಟಿ, ಮಹೇಶ ಹೊಸಕೊಪ್ಪ, ಬಿ.ಎನ್.ಸೂರ್ಯಪ್ರಕಾಶ, ನಾಗೇಶ ಕುರ್ಡೇಕರ್ ಉಪಸ್ಥಿತರಿದ್ದರು. ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುಭಾಷ ಗುನಗಿ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶೇಜವಾಡ ದೇವಸ್ಥಾನದಿಂದ ಬೈಕ್ ರ್ಯಾಲಿ ನಡೆಸಲಾಯಿತು. ನಿವೃತ್ತ ಸೈನಿಕರಾದ ಬಾಲಕೃಷ್ಣ ಭೋವಿ, ಕಮಲಾಕರ್ ನಾಗೇಕರ್, ಕೃಷ್ಣಾ ಬಾಬುಟಿಯಾ ಗುನಗಿ, ವಿವಿಧ ಕ್ಷೇತ್ರಗಳ ಗಣ್ಯರಾದ ಸುರೇಂದ್ರ ಆಚಾರಿ, ಗಣಪು ಗುನಗಾ, ಅಮಿತ ಗೌಡ, ಶಿವರಾಮ ಹುಲಸ್ವಾರ ಅವರನ್ನು ಸನ್ಮಾನಿಸಲಾಯಿತು.
………….