ಮೊದಲ ಕರೊನಾ ಸೋಂಕಿತ ಗುಣಮುಖ, ಆಸ್ಪತ್ರೆಯಿಂದ ಬೀಳ್ಕೊಡುಗೆ

26-hvr-05
Published on

ಹಾವೇರಿ: ನಗರದ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆ ಪಡೆಯುತ್ತಿದ್ದ 32 ವರ್ಷದ ಪಿ-639 ವ್ಯಕ್ತಿಯು ಗುಣಮುಖನಾಗಿ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ.

ಮೂಲತಃ ಸವಣೂರ ಪಟ್ಟಣದ ಎಸ್.ಎಂ. ಕೃಷ್ಣ ನಗರದ ನಿವಾಸಿಯಾಗಿರುವ ಪಿ-639 ಮುಂಬೈನಿಂದ ಮೇ 4ರಂದು ಜಿಲ್ಲೆಗೆ ಆಗಮಿಸಿದ್ದಾಗ ಕರೊನಾ ಸೋಂಕು ದೃಢಪಟ್ಟಿತ್ತು. ಇದರೊಂದಿಗೆ ಜಿಲ್ಲೆಯ ಮೊದಲ ಕರೊನಾ ಪ್ರಕರಣವೂ ಇದಾಗಿತ್ತು. ಈತನೊಂದಿಗೆ ಮುಂಬೈನಿಂದ ಆಗಮಿಸಿದ್ದ 40 ವರ್ಷದ ಸಹೋದರನಿಗೂ (ಪಿ-672) ಸೋಂಕು ದೃಢಪಟ್ಟಿತ್ತು. ಆದರೆ, ಇವನಿಗಂತ ಮೊದಲೇ ಆತ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ.

ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ ಆರು ಜನರಿಗೆ ಕರೊನಾ ಸೋಂಕು ದೃಢಗೊಂಡಿದ್ದು, ಇದರಲ್ಲಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನು ನಾಲ್ವರಿಗೆ ಚಿಕಿತ್ಸೆ ಮುಂದುವರಿದಿದೆ. ಮಂಗಳವಾರ ಬಿಡುಗಡೆಗೊಂಡ ಪಿ-639ಗೆ ಮುಂದಿನ 14 ದಿನಗಳ ಕಾಲ ಹೋಮ್ ಕ್ವಾರಂಟೈನ್​ನಲ್ಲಿರಲು ಆಸ್ಪತ್ರೆ ವೈದ್ಯರು ಸೂಚಿಸಿದ್ದಾರೆ.

ಗುಲಾಬಿ ಹೂ ನೀಡಿ ಬೀಳ್ಕೊಡುಗೆ: ಮಂಗಳವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ಪಿ-639ಗೆ ಕೋವಿಡ್ ಆಸ್ಪತ್ರೆಯ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಹಾಗೂ ಗುಲಾಬಿ ಹೂ ನೀಡಿ ಸರ್ಕಾರಿ ಆಂಬುಲೆನ್ಸ್ ಮೂಲಕ ಮನೆಗೆ ಕಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಪಿ-639ನ ನಾಲ್ಕು ಲ್ಯಾಬ್ ವರದಿ ನೆಗಟಿವ್ ಬಂದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಇನ್ನುಳಿದ ನಾಲ್ವರು ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು.

ಆಸ್ಪತ್ರೆಯ ವೈದ್ಯರಾದ ಡಾ. ಸುರೇಶ ಪೂಜಾರ, ಡಾ. ವಿಶ್ವನಾಥ ಸಾಲಿಮಠ, ದಾದಿಯರು, ಇತರ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

239 ಜನರ ಮಾದರಿ ಪರೀಕ್ಷೆಗೆ ರವಾನೆ

ಹಾವೇರಿ: ತೀವ್ರ ಉಸಿರಾಟದ ತೊಂದರೆ, ನೆಗಡಿ, ಕಫದಿಂದ ಬಳಲುತ್ತಿದ್ದ 239 ಜನರ ರಕ್ತ ಮತ್ತು ಗಂಟಲ ದ್ರವದ ಮಾದರಿಗಳನ್ನು ಮಂಗಳವಾರ ಪರೀಕ್ಷೆಗೆ ಕಳುಹಿಸಲಾಗಿದ್ದು, 2 ವರದಿಗಳು ನೆಗಟಿವ್ ಬಂದಿವೆ ಎಂದು ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆ, ನೆಗಡಿ, ಕಫದಿಂದ ಬಳಲುತ್ತಿದ್ದವರ ಒಟ್ಟು 5476 ಜನರ ರಕ್ತ, ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕರೊನಾ ಲಕ್ಷಣಗಳ ಆಧಾರದ ಮೇಲೆ ಸರ್ಕಾರಿ ಕ್ವಾರಂಟೈನ್​ನಲ್ಲಿ 9 ಜನರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಮಂಗಳವಾರ ದಾಖಲಾಗಿರುವ 4 ಜನ ಸೇರಿ ಒಟ್ಟು 607 ಜನರನ್ನು ಇರಿಸಿಕೊಳ್ಳಲಾಗಿದೆ.

ಈವರೆಗೆ ಒಟ್ಟು 5540 ಜನರ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 4693 ವರದಿಗಳು ನೆಗೆಟಿವ್ ಬಂದಿದೆ. 6 ಕರೊನಾ ಪಾಸಿಟಿವ್ ಬಂದಿದ್ದು, ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದ 806 ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net