ಮೈಸೂರು ತಂಡಗಳು ಚಾಂಪಿಯನ್

30 gkp 5
Published on

ಗೋಣಿಕೊಪ್ಪ: ರಾಜ್ಯ ಮಟ್ಟದ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮೈಸೂರು ತಂಡಗಳು ಚಾಂಪಿಯನ್ ಸ್ಥಾನ ಪಟ್ಟ ಅಲಂಕರಿಸಿವೆ.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಪ್ರಗತಿ ಶಾಲೆ ಸಹಯೋಗದಲ್ಲಿ ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯ ಲೀಗ್ ಹಂತದಲ್ಲಿ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಮೈಸೂರು 6 ಅಂಕಗಳೊಂದಿಗೆ ಪ್ರಥಮ ಸ್ಥಾನ, ಕಲಬುರಗಿ 4 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು.

ಬಾಲಕಿಯರ ವಿಭಾಗದಲ್ಲಿ ಮೈಸೂರು 4 ಅಂಕಗಳೊಂದಿಗೆ ಪ್ರಥಮ, ಕಲಬುರಗಿ 2 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಇದರೊಂದಿಗೆ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಮೈಸೂರು ಮತ್ತು ಕಲಬುರಗಿ ಕ್ರಮವಾಗಿ ಚಾಂಪಿಯನ್, ರನ್ನರ್ ಅಪ್ ಸ್ಥಾನ ಹಂಚಿಕೊಂಡವು.

ಬುಧವಾರ ನಡೆದ 17 ವರ್ಷದೊಳಗಿನ ಪ್ರೌಢಶಾಲಾ ವಿಭಾಗದಲ್ಲಿ ಮೈಸೂರು ತಂಡ ಚಾಂಪಿಯನ್ ಸ್ಥಾನ ಅಲಂಕರಿಸಿದ್ದು, ಕೂಡಿಗೆ ಕ್ರೀಡಾ ವಸತಿ ಶಾಲೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಬಾಲಕರ ಅಂತಿಮ ಪಂದ್ಯಾಟದಲ್ಲಿ ಮೈಸೂರು ತಂಡ 3-1 ಗೋಲುಗಳ ಅಂತರದಿಂದ ಕೂಡಿಗೆ ಕ್ರೀಡಾ ವಸತಿ ಶಾಲೆ ತಂಡದ ವಿರುದ್ಧ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಬಾಲಕಿಯರ ಅಂತಿಮ ಪಂದ್ಯಾಟದಲ್ಲಿ ಮೈಸೂರು ತಂಡ ಕೂಡಿಗೆ ವಸತಿ ಶಾಲೆ ತಂಡದ ವಿರುದ್ಧ 2-0 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದರೊಂದಿಗೆ ಕ್ರೀಡಾಕೂಟದಲ್ಲಿ ಕೊಡಗಿನ ಮಕ್ಕಳನ್ನೊಳಗೊಂಡ ಮೈಸೂರು ತಂಡ ಪಾರಮ್ಯ ಮೆರೆಯಿತು.

----------------

ಕ್ರೀಡಾಂಗಣ ಪುನಶ್ಚೇತನಕ್ಕೆ 25 ಲಕ್ಷ ರೂ. ಬಿಡುಗಡೆ

ಸಮಾರೋಪ ಸಮಾರಂಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ನಾಡಿನ ಕ್ರೀಡಾಪಟುಗಳು ಹಾಕಿ ಸೇರಿದಂತೆ ಇತರ ಕ್ರೀಡೆಯಲ್ಲೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ರಾಜ್ಯ ಸರ್ಕಾರ ಕ್ರೀಡಾಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಅವಕಾಶ ಕಲ್ಪಿಸಿದೆ. ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಯಶಸ್ಸಿನತ್ತ ಗಮನ ಹರಿಸಬೇಕು ಎಂದರು.

ಕೊಡಗು ಜಿಲ್ಲೆಯ ಪ್ರತಿ ಹೋಬಳಿಯಲ್ಲಿ ಕ್ರೀಡಾಂಗಣ ಪುನಃಶ್ಚೇತನಕ್ಕೆ ತಲಾ 25 ಲಕ್ಷ ರೂ.ಬಿಡುಗಡೆ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಕ್ರೀಡಾಂಗಣ ಅಭಿವೃದ್ಧಿ ಆಗಿದೆ. ಜಿಲ್ಲೆಯ ಕ್ರೀಡಾ ವಸತಿ ಶಾಲೆಗಳಲ್ಲಿ ಇನ್ನಷ್ಟು ಮೂಲಸೌಲಭ್ಯ ಒದಗಿಸಲು ಮುಂದಾಗಿದ್ದೇವೆ ಎಂದರು.

ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಹಾಗೂ ವಿರಾಜಪೇಟೆ ಪ್ರಗತಿ ಶಾಲೆ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ಪೊನ್ನಂಪೇಟೆ ಪಪಂ ಅಧ್ಯಕ್ಷರಾದ ಅಣ್ಣೀರ ಎಂ.ಹರೀಶ್, ಗೋಣಿಕೊಪ್ಪ ಗ್ರಾಪಂ ಅಧ್ಯಕ್ಷ ಪ್ರಮೋದ್ ಗಣಪತಿ, ಪೊನ್ನಂಪೇಟೆ ಸಪಪೂ ಕಾಲೇಜಿನ ಸಿಬಿಸಿ ಉಪಾಧ್ಯಕ್ಷ ಮೂಕಳೇರ ಕುಶಾಲಪ್ಪ, ಪ್ರಮುಖರಾದ ಪಿ.ಕೆ.ಪೊನ್ನಪ್ಪ, ಮಾದಂಡ ತಿಮ್ಮಯ್ಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಬಿ.ಆರ್. ಗಾಯತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಆರ್.ರವಿ, ಡಾ.ಬಿ.ಸಿ.ದೊಡ್ಡೇಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಷಯ ಪರಿವೀಕ್ಷಕಿ ಬಿಂದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net