

ಬಾಗಲಕೋಟೆ: ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಮಹಾದೇವಿ ಶೆಟ್ಟರ ತಯಾರಿಸಿದ ಸಿರಿಧಾನ್ಯದ ಮೈಸೂರ ಪಾಕ್ ಹಾಗೂ ಜಯಶ್ರೀ ತೆಗ್ಗಿ ತಯಾರಿಸಿದ ಮೋಮೋಸ್ ಖಾರದ ತಿನಿಸು ಪ್ರಥಮ ಬಹುಮಾನ ಪಡೆದುಕೊಂಡವು.
2023 ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಆಚರಿಸುತ್ತಿದೆ. ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯುವ ಮೇಳೆ-2024ರ ಅಂಗವಾಗಿ ರಾಜ್ಯ ಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆ ಏರ್ಪಡಿಸಲಾಗಿದ್ದು, ಪಾಕ ಸ್ಪರ್ಧೆಯಲ್ಲಿ ತಯಾರಿಸಲಾದ ರುಚಿ ರುಚಿಯಾದ ವಿವಿಧ ಬಗೆಯ ಸಿರಿಧಾನ್ಯ ಪಾಕಗಳಲ್ಲಿ ಮೈಸೂರು ಪಾಕ್ ಮತ್ತು ಮೋಮೋಸ್ ಪ್ರಥಮ ಸ್ಥಾನ ಪಡೆದುಕೊಂಡಿವೆ.
ಪಾಕ ಸ್ಪರ್ಧೆಯಲ್ಲಿ ಒಟ್ಟು 46 ಜನ ಪಾಕ ಪ್ರವೀಣೆಯರು ಭಾಗವಹಿಸಿ ಸಿರಿಧಾನ್ಯಗಳಲ್ಲಿ ಸಿಹಿ ಪದಾರ್ಥಗಳಾದ ಸಿರಿಧಾನ್ಯದ ಮೈಸೂರ ಪಾಕ್, ನವಣೆ ಪಾಯಸ, ರಾಗಿ ಉಂಡೆ, ನವಣಕ್ಕೆ ಉಂಡೆ, ರಾಗಿ ಹಲ್ವಾ, ಪಾಯಸ ಹಾಗೂ ಖಾರದ ತಿನಿಸುಗಳಾದ ಸಜ್ಜೆ ಬಿಸಿಬೆಳೆ ಬಾತ್, ಸಜ್ಜೆ ರೊಟ್ಟಿ, ಸಿರಿಧಾನ್ಯ ಮಸಾಲಾ ರೊಟ್ಟಿ, ಸಿರಿಧಾನ್ಯದ ಚಕ್ಕುಲಿ, ಫಲಾವ್, ಸಿರಿಧಾನ್ಯದ ಮೋಮೋಸ್, ಸಾವಿ ಕಿಚಡಿ ಹಾಗೂ ರಾಗಿ ಹಪ್ಪಳ ಅಲ್ಲದೇ ಹತ್ತು ಹಲವು ಖಾದ್ಯಗಳನ್ನು ಪ್ರದರ್ಶಿಸಲಾಯಿತು. ನೋಡುಗರ ಬಾಯಲ್ಲಿ ನೀರೂರಿಸಿದವು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಶಶೀಧರ ಕುರೇರ ಸಿರಿಧಾನ್ಯ ಪಾಕಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು ಆರೋಗ್ಯಕರ ಸಮಾಜಕ್ಕೆ ಸಿರಿಧಾನ್ಯಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪಾಕಸ್ಪರ್ಧೆ ಏರ್ಪಡಿಸಲಾಗಿದೆ. ಸಿರಿಧಾನ್ಯಗಳ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಬೇಕು. ಸಿರಿಧಾನ್ಯ ಪದಾರ್ಥಗಳನ್ನು ದಿನನಿತ್ಯದ ಬಳಸುವ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳುವಂತೆ ಕರೆ ನೀಡಿದರು. ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಹೆಚ್ಚಿನ ಆದ್ಯತೆ ನೀಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಎಲ್.ಆಯ್.ರೂಢಗಿ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಾಕಸ್ಪರ್ಧೆಯ ತೀರ್ಪುಗಾರರಾಗಿ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನ ಪ್ರಾದ್ಯಾಪಕಿ ಡಾ.ಭಾರತಿ ಮೇಟಿ, ವಿಜಯಪುರ ಕೃಷಿ ಮಹಾವಿದ್ಯಾಲಯದ ಪ್ರಾದ್ಯಾಪಕಿ ಕಾಶಿಬಾಯಿ ಖ್ಯಾದಗಿ, ತೋವಿವಿಯ ಪ್ರಾದ್ಯಾಪಕಿ ಭುವನೇಶ್ವರಿ ಆಗಮಿಸಿದ್ದರು.