

ಬಾಗಲಕೋಟೆ: ನಾನು ಸಾಯುವವರೆಗೂ ರಾಜಕಾರಣ ಮಾಡುತ್ತೇನೆ. ಇದು ಸಮಾಜ ಸೇವೆಯ ಒಂದು ಭಾಗ. ಬಿಜೆಪಿಯಲ್ಲಿ ಶುದ್ಧೀಕರಣ ಆಗಬೇಕು ಎನ್ನುವುದು ನನ್ನ ಹೋರಾಟದ ಉದ್ಧೇಶವಾಗಿದೆ. ಇದು ಕರ್ನಾಟಕದ ಬಿಜೆಪಿ ನಾಯಕರ ಆಸೆಯೂ ಆಗಿದೆ. ನಾನು ಸತ್ತರೂ ಸಹ ಬಿಜೆಪಿ ಧ್ವಜವನ್ನು ಮೈಮೇಲೆ ಹಾಕಿಕೊಂಡೆ ಸಾಯುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಹೊರಗೆ ಇರುವವನಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಶುದ್ಧೀಕರಣ ಆಗಬೇಕು ಎಂದು ಕೆಲವರು ಬಹಿರಂಗವಾಗಿ ಹೇಳುತ್ತಿಲ್ಲ. ನಾನು ಅದನ್ನು ಹೇಳಿ ಹೊರಬಂದಿದ್ದೇನೆ. ಈಗ ಯತ್ನಾಳ್, ಲಿಂಬಾವಳಿ, ಜಾರಕಿಹೊಳಿ ಸೇರಿ ಅದನ್ನು ಹೇಳಿದ್ದಾರೆ. ಇದರಿಂದ ಅವರು ನನ್ನ ಜೊತೆ ಇರಬೇಕು ಎನ್ನಲ್ಲ. ನನ್ನ ವಿಚಾರಕ್ಕೆ ಪೂರಕವಾಗಿ ಮಾತನಾಡುತ್ತಿದ್ದಾರೆ ಎನ್ನುವುದೇ ನನ್ನ ಯಶಸ್ಸು ಎಂದರು.
ಲೋಕಸಭೆ ಚುನಾವಣೆಯಲ್ಲಿ ನಾನು ಯಡಿಯೂರಪ್ಪ ಅವರ ಮಗ ರಾಘವೇಂದ್ರ ವಿರುದ್ಧ ಸೋತಿಲ್ಲ. ನರೇಂದ್ರ ಮೋದಿ ಅವರ ಎದುರು ಸೋತಿದ್ದೇನೆ. ಈ ದೇಶ, ರಾಜ್ಯ, ಶಿವಮೊಗ್ಗದ ಜನರು ಮೋದಿ ನೋಡಿ ಓಟು ಹಾಕಿದ್ದೇ ವಿನಃ ಅದು ರಾಘವೇಂದ್ರನ ನೋಡಿ ಅಲ್ಲ. ಮೋದಿ ಹಾಗೂ ಬಿಜೆಪಿ ಧ್ವಜವನ್ನು ಬಿಟ್ಟು ಬಿಎಸ್‌ವೈ ಹಾಗೂ ಅವರ ಮಕ್ಕಳು ಹೊರಗೆ ಬರಲಿ ನೋಡೋಣ. ಹಿಂದೆ ಬಂದು ಕೆಜಿಪಿ ಕಟ್ಟಬೇಕಾದರೆ ಏನಾಯಿತು? ನಾನು ರಾಜಕಾರಣ ಮಾಡುವವನೆ.. ಪಕ್ಷದಲ್ಲಿ ಶುದ್ಧೀಕರಣ ಆಗಬೇಕು ಎಂದು ಮೊದಲ ಹೆಜ್ಜೆ ಇಟ್ಟಿದ್ದೇನೆ. ಅದು ಆಗಿಯೇ ಆಗುತ್ತದೆ ಎಂದರು.
ಬಿಜೆಪಿಯನ್ನು ಸಾವಿರಾರು ಜನರು ರಕ್ತವನ್ನು ಬೆವರಿನಂತೆ ಸುರಿದಿ ಕಟ್ಟಿದ್ದಾರೆ. ಹಿಂದೆ ಅನಂತಕುಮಾರ್, ಯಡಿಯೂರಪ್ಪ, ನಾನು, ಆಚಾರ್ಯ, ರಾಮಚಂದ್ರಪ್ಪ ಎಲ್ಲರೂ ಒಟ್ಟಿಗೆ ಕೂತು, ಚರ್ಚೆ ಮಾಡಿ ತೀರ್ಮಾನ ಮಾಡುತ್ತಿದ್ದೇವು. ಇಂದು ಪರಿಸ್ಥಿತಿ ಇಲ್ಲ.ಹೀಗಾಗಿ ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಬೇಕು ಎನ್ನುವುದು. ಅದನ್ನೆ ಜಾರಕಿಹೊಳಿ, ಲಿಂಬಾವಳಿ, ಯತ್ನಾಳ್ ಸಹ ಹೇಳುತ್ತಿದ್ದಾರೆ. ಅವರು ಹೇಳಿದ್ದು ಸರಿ ಇದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರೆಂದು ಒಪ್ಪಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಈಚೆಗೆ ನಡೆದ ಸಭೆಯಲ್ಲಿ ಬಿಜೆಪಿಯ ೪೦ ಜನರನ್ನು ಕರೆದಿದ್ದು, ಅದರಲ್ಲಿ ೩೭ ಜನರು ರಾಜ್ಯಾಧ್ಯಕ್ಷರ ವಿರುದ್ಧವೇ ಮಾತನಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.