

ತಿ.ನರಸೀಪುರ: ಸಾಲ ವಸೂಲಾತಿ ಸಂಬಂಧ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ತಾಲೂಕಿನ ವಡೆಯಾಂಡಳ್ಳಿ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಆತ್ಮಹತ್ಯೆಗೆ ಪ್ರೇರೇಪಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮಹಿಳಾ ಸಂಘಗಳ ಸದಸ್ಯರು ಗುರುವಾರ ತಾಲೂಕು ಕಚೇರಿಯಲ್ಲಿ ಗ್ರೇಡ್2 ತಹಸೀಲ್ದಾರ್ ರಾಜಾಕಾಂತ್ ಅವರಿಗೆ ದೂರು ಸಲ್ಲಿಸಿದರು.
ತಲಕಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೆಯಾಂಡಳ್ಳಿ ಗ್ರಾಮದ ಮಹಿಳಾ ಸಂಘಗಳ ಸದಸ್ಯರು ಪಟ್ಟಣದ ತಾಲೂಕು ಕಚೇರಿಯಲ್ಲಿ ಮಾತನಾಡಿ, ಕೂಲಿ ಕಾರ್ಮಿಕರಾಗಿರುವ ನಾವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಮನೆ ನಿರ್ವಹಣೆಗೆಂದು ಫೈನಾನ್ಸ್‌ಗಳಲ್ಲಿ ಸಾಲ ತೆಗೆದುಕೊಂಡಿದ್ದೆವು. ಸಾಲ ವಸೂಲಿಗೆ ಬರುವ ಮೈಕ್ರೋಫೈನಾನ್ಸ್ ಸಿಬ್ಬಂದಿ ಮಹಿಳೆಯರು ಎನ್ನದೆ ಸಾಲ ಮರುಪಾವತಿಗೆ ಕಾಲಾವಕಾಶ ಕೊಡದೆ ಅಸಭ್ಯವಾಗಿ ವರ್ತಿಸುತ್ತಾರೆ. ಸಾಲ ಕಟ್ಟಲಾಗದ ಮೇಲೆ ಯಾತಕ್ಕೆ ಬದುಕಿದ್ದೀರಿ ಅಂತ ಆತ್ಮಹತ್ಯೆಗೆ ಪ್ರಚೋದಿಸುವ ಮಾತುಗಳನ್ನಾಡುತ್ತಾರೆ ಎಂದು ದೂರಿದರು.
ದಸಂಸ ತಾಲೂಕು ಸಂಚಾಲಕ ಕುಕ್ಕೂರು ರಾಜು ಮಾತನಾಡಿ, ಸುಲಭ ಕಂತುಗಳಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುತ್ತೇವೆ. ಮಹಿಳೆಯರು ನೀವು ಸಂಘಗಳನ್ನು ಮಾಡಿಕೊಳ್ಳಿ ಎಂದು ಉತ್ತೇಜಿಸಿ ಅವರಿಗೆ ಸಾಲವನ್ನು ಕೊಡುವ ಮೈಕ್ರೋಫೈನಾನ್ಸ್ ಸಿಬ್ಬಂದಿ ಸರಿಯಾದ ಸಮಯಕ್ಕೆ ಸಾಲ ಪಾವತಿಸದಿದ್ದರೆ ಹೆಚ್ಚಿನ ಕಾಲಾವಕಾಶ ನೀಡದೆ ಸಾಲ ಪಡೆದ ಮಹಿಳೆಯರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ. ತಲಕಾಡು ಹೋಬಳಿ ವಡೆಯಾಂಡಹಳ್ಳಿ ಗ್ರಾಮಕ್ಕೆ ಅನೇಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂದು ಮಹಿಳೆಯರನ್ನು ಉತ್ತೇಜಿಸಿ, ಸಂಘಗಳನ್ನು ಮಾಡಿಸಿ ಸುಮಾರು ಮೂರ‌್ನಾಲ್ಕು ವರ್ಷಗಳಿಂದ ಸಾಲವನ್ನು ಕೊಟ್ಟಿದ್ದಾರೆ. ಆದರೆ, ಸಾಲ ವಸೂಲಾತಿ ನೆಪದಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದರು.
ಕೂಲಿ ಮಾಡಿಕೊಂಡು ಜೀವನ ಮಾಡುತ್ತಿರುವ ಮಹಿಳೆಯರು ಸಾಲವನ್ನು ಕಟ್ಟುತ್ತಾ ಬಂದಿದ್ದಾರೆ. ಕೆಲವರು ತಮ್ಮ ಗಂಡನ ಆರೋಗ್ಯ ಸಮಸ್ಯೆ, ಕೂಲಿ ಮಾಡದಿದ್ದರಿಂದ ಸಾಲವನ್ನು ಸಮಯಕ್ಕೆ ಸರಿಯಾಗಿ ಕಟ್ಟಲಾಗುತ್ತಿಲ್ಲ. ಇಂಥವರಿಗೆ ಮನೆಗೆ ಹೋಗಿ ಜಗಳ ಮಾಡುವುದು, ಅವಾಚ್ಯ ಪದಗಳಿಂದ ನಿಂದಿಸುವುದು, ಆತ್ಮಹತ್ಯೆಗೆ ಪ್ರಚೋದನೆ ನೀಡುವಂತ ಮಾತನಾಡುತ್ತಿದ್ದಾರೆ. ಕೂಡಲೇ ಹಣಕಾಸು ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ತಾಲೂಕು ಆಡಳಿತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಡೆಯಾಂಡಹಳ್ಳಿ ಗ್ರಾಮದ ಮಹಿಳಾ ಸಂಘಗಳ ಸದಸ್ಯರಾದ ರಾಜೇಶ್ವರಿ, ದೀಪಾ, ಪಾರ್ವತಮ್ಮ, ರಾಣಿ, ಪುಷ್ಪಲತಾ, ಶೃತಿ,
ದೇವಮ್ಮ, ಸರಸ್ವತಿ, ಶ್ರೀದೇವಿ, ರಾಜೇಶ್ವರಿ ಇತರರು ಇದ್ದರು.