ಮೈಕ್ರೋ ಫೈನಾನ್ಸ್ ಕಂಪನಿಗಳ ಕಾಟ ಗುಳೇ ಹೋಗುತ್ತಿರುವ ಗ್ರಾಮಸ್ಥರು

16 njd newss 01
Published on

ನಂಜನಗೂಡು: ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಪ್ರಕರಣ ನಂಜನಗೂಡು ಮತ್ತು ವರುಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು ಹಲವು ಕುಟುಂಬಗಳು ಊರು ಖಾಲಿ ಮಾಡುತ್ತಿವೆ.

ತಾಲೂಕಿನ ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ಶಿರಮಳ್ಳಿ, ಕಗ್ಗಲೂರು, ಮಾದಾಪುರ, ಹೆಗ್ಗಡಹಳ್ಳಿ, ಮುದ್ದಹಳ್ಳಿ, ಗೋಳೂರು ಸೇರಿದಂತೆ ಹಲವು ಗ್ರಾಮಗಳಲ್ಲಿನ ಜನರು ಮೈಕ್ರೋ ಫೈನಾನ್ಸ್ ಕಂಪನಿಗಳ ಕಾಟಕ್ಕೆ ಬೇಸತ್ತು ಕೆಲಸ ಕಾರ್ಯಗಳನ್ನು ಹರಸಿ ದೂರದ ಊರುಗಳಿಗೆ ಗುಳೇ ಹೊರಟಿದ್ದಾರೆ.

ಕೇವಲ ಆಧಾರ್ ಕಾರ್ಡ್ ಜೆರಾಕ್ಸ್ ಪಡೆದು ಭದ್ರತೆ ಇಲ್ಲದೆ ಸುಲಭವಾಗಿ ಸಾಲ ನೀಡುವ ಕಾರಣಕ್ಕೆ ಕೂಲಿ ಕಾರ್ಮಿಕರು ಮತ್ತು ರೈತರು ಸಾಲ ಪಡೆಯುತ್ತಿದ್ದಾರೆ. ವಾರದ ಕಂತು ಹಾಗೂ ತಿಂಗಳ ಕಂತುಗಳ ಮೂಲಕ ಸಾಲ ವಾಪಸ್ ಕಟ್ಟುತ್ತಿದ್ದಾರೆ. ಸಾಲ ಮರುಪಾವತಿಗೆ ಒಂದು ದಿನ ತಡವಾದರೂ ಕಂಪನಿಯವರು ಮನೆಯ ಬಳಿಗೆ ಬಂದು ಕಿರುಕುಳ ನೀಡುತ್ತಾರೆ ಎಂಬ ದೂರುಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿವೆ. ಇದರ ಜತೆಗೆ ಮನೆ ಮುಂಭಾಗದ ಗೋಡೆಗಳಿಗೆ ನಾಮ ಫಲಕಗಳನ್ನು ಹಾಕುತ್ತಿರುವುದು ಸಾಲ ಪಡೆದಿರುವ ಮನೆಯ ಮಾಲೀಕ ಮರ್ಯಾದೆಗೆ ಅಂಜುವಂತಾಗಿದೆ. ಪರಿಣಾಮ ತಾಲೂಕಿನ ಕೆಲವು ಗ್ರಾಮಗಳ ಗ್ರಾಮಸ್ಥರು ದೂರದ ಕೊಡಗು, ಕೇರಳ ಸೇರಿದಂತೆ ವಿವಿಧ ಭಾಗಗಳಿಗೆ ಕೂಲಿ ಕೆಲಸಕ್ಕಾಗಿ ಮನೆಗಳಿಗೆ ಬೀಗ ಹಾಕಿ ಗುಳೇ ಹೋಗುತ್ತಿದ್ದಾರೆ.

ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದ ಪರಿಣಾಮ ಕೆಲ ಕುಟುಂಬಸ್ಥರು ಸಾವು ನೋವು ಸಂಭವಿಸಿದ್ದಲ್ಲಿ ಭಾಗವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಂಪನಿಗಳ ಕಾಟಕ್ಕೆ ಬೆದರಿ ಗ್ರಾಮದತ್ತ ಮುಖ ತೋರಿಸಲು ಸಾಧ್ಯವಾಗದಂತಾಗಿದೆ. ಆಮಿಷವೊಡ್ಡಿ ಬಲವಂತವಾಗಿ ಸಾಲ ಕೊಡುತ್ತಿರುವ ಮೈಕ್ರೋ ಫೈನಾನ್ಸ್‌ಗಳು ನಂತರ ವಸೂಲಿಗೆ ಅನ್ಯ ಮಾರ್ಗಗಳನ್ನು ಹಿಡಿದು ಕಿರುಕುಳ ಕೊಡುತ್ತಿವೆ ಎಂದು ಆರೋಪಿಸುತ್ತಿರುವ ಸ್ಥಳೀಯರು ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.

ವಿಷ ಸೇವಿಸಿ ಇಬ್ಬರು ಆತ್ಮಹತ್ಯೆ

ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಇಬ್ಬರು ಮಹಿಳೆಯರು ಮೈಕ್ರೋ ಫೈನಾನ್ಸ್ ಕಂಪನಿಗಳು ಸೇರಿದಂತೆ ಕೆಲವು ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದ ಪರಿಣಾಮ ಮರ್ಯಾದೆಗೆ ಹೆದರಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುಮಾರು ನಾಲ್ಕು ತಿಂಗಳ ಹಿಂದೆ ಘಟನೆ ನಡೆದಿದೆ ಎನ್ನಲಾಗಿದೆ. ಒಬ್ಬ ಮಹಿಳೆ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ಮಾತ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮತ್ತೊಬ್ಬ ಮಹಿಳೆ ಸಾವಿನ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net