ಮೇವು ತರಲು ಹೋದ ರೈತ ಹಿನ್ನೀರಲ್ಲಿ ನಾಪತ್ತೆ

48dde179-290b-437c-beb4-1c5b73795ba1
ರೈತ ಸಿದ್ದಪ್ಪ ಅಡೊಳ್ಳಿ.
Published on

ಬಾಗಲಕೋಟೆ : ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ರೈತನೊಬ್ಬ ಕೃಷ್ಣಾ ನದಿಯ ಹಿನ್ನೀರಿನಲ್ಲಿ ನಾಪತ್ತೆ ಆಗಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಆಲಗೂರ ಗ್ರಾಮದ ಸಿದ್ದಪ್ಪ ಅಡೊಳ್ಳಿ(65) ನದಿ ನೀರಲ್ಲಿ ನಾಪತ್ತೆ ಆಗಿರುವ ರೈತ ಎಂದು ಗುರುತಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಜಮೀನುಗಳು ನಡುಗಡ್ಡೆ ಆಗಿವೆ.

ಜಾನುವಾರುಗಳಿಗೆ ಮೇವುತರಲದು ಸೈಕಲ್ ತೆಗೆದುಕೊಂಡು ಜಮೀನಿಗೆ ಹೋಗಿದ್ದ ರೈತ ಸಿದ್ದಪ್ಪ ಹೋಗಿದ್ದ. ನದಿಯಿಂದ ಅಪಾರ ಪ್ರಮಾಣದ ನೀರು ಬಂದಿದ್ದರಿಂದ ಹಿನ್ನೀರಿನ‌ ದಡದಲ್ಲಿ ಸೈಕಲ್ ನಿಲ್ಲಿಸಿ ನೀರಲ್ಲಿ ನಡೆದುಕೊಂಡು ಹೋಗಿದ್ದ ಎನ್ನಲಾಗಿದೆ.

ಆದರೆ, ಕ್ಷಣ ಕ್ಷಣಕ್ಕೂ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಜಮೀನಿನಿಂದ ಮೇವಿನ‌ ಹೊರೆ ತರುವ ವೇಳೆ ಹೊರಬರಲು ಸಾಧ್ಯವಾಗದೇ ನಾಪತ್ತೆ ಆಗಿದ್ದಾನೆ.

ದಡದಲ್ಲಿ ನಿಲ್ಲಿಸಿದ್ದ ಸೈಕಲ್ ಅಲ್ಲಿಯೇ ಇದೆ. ಇನ್ನೂ ಮೇವಿನ ಹೊರೆ ನೀರಲ್ಲಿ ಕೊಚ್ಚಿ ಬೇರೆ ಕಡೆಗೆ ಸಿಲುಕಿದೆ.

ನೀರಲ್ಲಿ ನಾಪತ್ತೆ ಆಗಿರುವ ರೈತ ಸಿದ್ದಪ್ಪನಿಗಾಗಿ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಮೀನುಗಾರರು ಶೋಧ ಕಾರ್ಯ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

ಶನಿವಾರ ಸಂಜೆವರೆಗೂ ರೈತ ಸಿದ್ದಪ್ಪನ ಸುಳಿವು ಸಿಕ್ಕಿಲ್ಲ. ನೀರಿನ ಹರಿವು ಹೆಚ್ಚಿರುವುದರಿಂದ ಅಗ್ನಿಶಾಮಕ ಸಿಬ್ಬಂದಿ ಬೋಟ್ ನಿಂದ ಹುಡುಕಾಟ ಮುಂದುವರೆಸಿದ್ದಾರೆ.

ಜಮಖಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net