ಮೇಕರ್ಸ್ ಹಬ್​ನ ವಿದ್ಯಾರ್ಥಿಗಳಿಂದ ಫೇಸ್​ಶೀಲ್ಡ್ ತಯಾರಿ

5bkl2 (4)
Published on

ಭಟ್ಕಳ: ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯಕೀಯ ಸಿಬ್ಬಂದಿ ಮಾಸ್ಕ್​ಗಳ ಕೊರತೆ ಅನುಭವಿಸುತ್ತಿದ್ದು, ಅವರಿಗೆ ಮುಖಗವಸು (ಫೇಸ್ ಶೀಲ್ಡ್)ಗಳನ್ನು ಸಿದ್ಧಪಡಿಸಿ ನೀಡಲು ಇಲ್ಲಿನ ಮೇಕರ್ಸ್ ಹಬ್​ನ ವಿದ್ಯಾರ್ಥಿಗಳು ಮುಂದೆ ಬಂದಿದ್ದಾರೆ.

ಪಟ್ಟಣದ ಮದೀನಾ ಕಾಲನಿಯಲ್ಲಿರುವ ಮೇಕರ್ಸ್ ಹಬ್​ನ ವಿದ್ಯಾರ್ಥಿಗಳು ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರಿಗೆ ನೆರವಾಗಬಲ್ಲ ಫೇಸ್ ಶೀಲ್ಡ್ ಯನ್ನು ಸಿದ್ಧಗೊಳಿಸುತ್ತಿದ್ದಾರೆ. ಫೇಸ್ ಶೀಲ್ಡ್ ಸಂಪೂರ್ಣ ಮುಖವನ್ನು ಮುಚ್ಚುತ್ತದೆ. ಇದರಿಂದಾಗಿ ಕಣ್ಣುಗಳಿಗೆ ಸೋಂಕು ಹರಡುವುದರಿಂದ ತಡೆಯಬಹುದಾಗಿದೆ. ಅಲ್ಲದೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೂ ಇದು ಅತ್ಯಂತ ಉಪಯುಕ್ತವಾಗಿದ್ದು, ಬಾಯಿ, ಕಣ್ಣು, ಮೂಗಿಗೆ ಇದರಿಂದ ರಕ್ಷಣೆ ಸಿಗುತ್ತದೆ ಆರಂಭದಲ್ಲಿ ಕನಿಷ್ಠ 100 ಫೇಸ್ ಶೀಲ್ಡ್ ಗಳನ್ನು ಸಿದ್ಧಗೊಳಿಸಲು ಯೋಜಿಸಲಾಗಿದ್ದು, ಇದಕ್ಕಾಗಿ ಕೋವಿಡ್-19 ವೈದ್ಯಕೀಯ ನೋಡಲ್ ಅಧಿಕಾರಿ ಡಾ.ಶರದ್ ನಾಯಕ ಅವರಿಂದ ಅನುಮತಿ ಪಡೆಯಲಾಗಿದೆ. ಮುಂದೆ ಇದಕ್ಕಾಗಿ ಯಂತ್ರವನ್ನು ತರುವ ಯೋಚನೆಯಿದ್ದು, ಒಂದು ದಿನಕ್ಕೆ 500ಕ್ಕೂ ಹೆಚ್ಚು ಫೇಸ್ ಶೀಲ್ಡ್ ಗಳನ್ನು ಸಿದ್ಧಗೊಳಿಸುವ ಯೋಜನೆ ಮೇಕರ್ಸ್ ಹಬ್ ಹೊಂದಿದೆ ಎನ್ನುತ್ತಾರೆ ಮೇಕರ್ಸ್ ಹಬ್ ಸದಸ್ಯ ನುಹೇಲ್ ದಾಮೋದಿ.

ಇಂಜಿನಿಯರಿಂಗ್ ಕಲಿಯುತ್ತಿರುವ ಹಾಗೂ ಇತರ ಆಸಕ್ತ ವಿದ್ಯಾರ್ಥಿಗಳು 2017ರಲ್ಲಿ ಮೇಕರ್ಸ್ ಹಬ್’ ಹೆಸರಲ್ಲಿ ಮದೀನಾ ಕಾಲನಿಯ ಕುತುಬ್ ಹಾಲ್​ನಲ್ಲಿ ಸಂಸ್ಥೆಯೊಂದನ್ನು ಹುಟ್ಟು ಹಾಕಿದೆ. ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಯೋಜನೆಗಳನ್ನು ಸಿದ್ಧ್ದೊಳಿಸಿವುದು, ಮಾರ್ಗದರ್ಶನ ನೀಡುವುದು, ಯುವ ಪೀಳಿಗೆಗೆ ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸಲು ಕಾರ್ಯಾಗಾರಗಳನ್ನು ಆಯೋಜಿಸುವುದು ಈ ಮೇಕರ್ಸ್ ಹಬ್​ನ ಕಾರ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net