ಮೇ 4 ರಿಂದ ಮರಳು ಗಣಿಗಾರಿಕೆಗೆ ಅವಕಾಶ

sand_mining
Published on

ಕಾರವಾರ: ಮೇ 4 ರಿಂದ ಜಿಲ್ಲೆಯ ಮೂರು ನದಿಗಳಲ್ಲಿ ಉಸುಕು ಗಣಿಗಾರಿಕೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ 12 ಸದಸ್ಯರ ಜಿಲ್ಲಾ ಸಿಆರ್​ರೆಡ್ ಹಾಗೂ ಮರಳು ಉಸ್ತುವಾರಿ ಸಮಿತಿ ಅವಕಾಶ ನೀಡಿದೆ.

2019 ರ ಅಕ್ಟೋಬರ್​ನಿಂದಲೇ ಬಂದಾಗಿದ್ದ ಉಸುಕು ಗಣಿಗಾರಿಕೆಗೆ ಏಳು ತಿಂಗಳ ನಂತರ ಅನುಮತಿ ದೊರೆಯುತ್ತಿದೆ. ಆದರೆ, ಈಗ ಒಂದೇ ತಿಂಗಳು ಅವಕಾಶವಿದ್ದು, ಜೂನ್ ನಂತರ ಮತ್ತೆ ಉಸುಕು ಗಣಿಗಾರಿಕೆಯನ್ನು ಮಳೆಗಾಲದ ಕಾರಣಕ್ಕೆ ಬಂದ್ ಮಾಡಲಾಗುತ್ತದೆ.

ಜಿಲ್ಲೆಯ ಕುಮಟಾದ ಅಘನಾಶನಿಸಿ, ಅಂಕೋಲಾದ ಗಂಗಾವಳಿ, ಹಾಗೂ ಹೊನ್ನಾವರದ ಶರಾವತಿ ನದಿಗಳ ಒಟ್ಟು ಐದು ಮರಳು ದಿಬ್ಬಗಳಲ್ಲಿ ಉಸುಕು ತೆಗೆಯಲು ಮಾರ್ಚ್ 12 ರಂದು ರಾಜ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಅನುಮತಿ ನೀಡಿತ್ತು. ಆದರೆ, ಲಾಕ್​ಡೌನ್ ಸೇರಿ ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಇನ್ನೂ ಪ್ರಾರಂಭವಾಗಿರಲಿಲ್ಲ.

ಸದ್ಯ ಕಟ್ಟಡ ಹಾಗೂ ಆಯ್ದ ನಿರ್ಮಾಣ ಕಾಮಗಾರಿಗಳಿಗೆ ಕರೊನಾ ಲಾಕ್​ಡೌನ್ ನಡುವೆಯೂ ಅನುಮತಿ ನೀಡಲಾಗಿದ್ದು, ಅವುಗಳಿಗೆ ಮರಳಿನ ಕೊರತೆ ಉಂಟಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಸೋಮವಾರ ಸಭೆ ನಡೆಸಿದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಈ ಕುರಿತು ನಿರ್ಣಯ ಕೈಗೊಂಡಿದೆ. ಜಿಲ್ಲೆಯಲ್ಲಿ ಕಳೆದ ಬಾರಿ 88 ಸಾಂಪ್ರದಾಯಿಕ ಮರಳುಗಾರಿಕೆ ಮಾಡುವವರಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಈ ಬಾರಿಯೂ ಅಷ್ಟೇ ಜನರಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾಳಿ ನದಿಯಲ್ಲಿ ಸದ್ಯಕ್ಕಿಲ್ಲ ಅವಕಾಶ: ಕಾರವಾರದ ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸಲು ಕೇಂದ್ರ ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆ ಅನುಮತಿ ನೀಡಿದೆ. ಆದರೆ, ಇನ್ನು ಮರಳು ಪಟ್ಟಿ ಗುರುತಿಸುವ ಕಾರ್ಯ ಹಾಗೂ ರಾಜ್ಯ ಸಿಆರ್​ರೆಡ್ ಅನುಮತಿ ಬಾಕಿ ಇರುವುದರಿಂದ ಸದ್ಯಕ್ಕೆ ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಂಪ್ರದಾಯಿಕ ಗುತ್ತಿಗೆದಾರರಿಗೆ ಉಸುಕು ತೆಗೆಯಲು ಮೇ 4 ರಿಂದ ತಾತ್ಕಾಲಿಕ ಪಾಸ್ ನೀಡಲಾಗುವುದು. ಜಿಲ್ಲೆಯ ಆಯ್ದ ನದಿಗಳ ಗುರುತಿಸಿದ ಮರಳು ಪಟ್ಟಿಗಳಿಗೆ ಮಾತ್ರ ಈ ಅವಕಾಶ ಅನ್ವಯವಾಗಲಿದೆ. ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net