ಮೆರಿಟೈಮ್ ಥಿಯೇಟರ್ ಶೀಘ್ರದಲ್ಲಿ ಆರಂಭ

5KWR3
Published on

ಕಾರವಾರ: ಭಾರತೀಯ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಸೇನೆಗಳ ಜಂಟಿ ಕಮಾಂಡ್ ‘ಮೆರಿಟೈಮ್ ಥಿಯೇಟರ್’ ಕಾರವಾರದಲ್ಲಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇಲ್ಲಿನ ಕದಂಬ ನೌಕಾನೆಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಚೀನಾ ಸೇರಿದಂತೆ ವಿಶ್ವದ ಪ್ರಬಲ ಶಕ್ತಿಗಳ ವಿರುದ್ಧ ದೇಶದ ರಕ್ಷಣಾ ಪಡೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಸಲುವಾಗಿ ಜಂಟಿ ಕಮಾಂಡ್​ಗಳನ್ನು ಇದೇ ವರ್ಷ ರಚಿಸಲಾಗುತ್ತಿದೆ ಎಂದು ಈ ಹಿಂದೆಯೇ ಜನರಲ್ ರಾವತ್ ಘೊಷಿಸಿದ್ದರು. ಕಾರವಾರದ ಬಿಣಗಾದಲ್ಲಿ ನೌಕಾಸೇನೆಯ ವ್ಯಾಪ್ತಿಯ ಪ್ರದೇಶದಲ್ಲಿ ಮೆರಿಟೈಮ್ ಥಿಯೇಟರ್ ಕೇಂದ್ರ ಕಚೇರಿ ಸ್ಥಾಪನೆಯ ಪ್ರಸ್ತಾಪವಿದೆ. ಈ ಹಿನ್ನೆಲೆಯಲ್ಲಿ ಜನರಲ್ ರಾವತ್ ಸೋಮವಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಕರ್ನಾಟಕ ನೌಕಾವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಜನರಲ್ ರಾವತ್ ಅವರನ್ನು ಸ್ವಾಗತಿಸಿದರು. ನೌಕಾ ಹಡಗು ರಿಪೇರಿ ಪ್ರಾಂಗಣದ ನವೀಕರಣ, ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿದರು. ನಂತರ ರಾವತ್ ನಾವಿಕರು ಹಾಗೂ ನೌಕಾಸೇನೆಯ ಇತರ ಸಿಬ್ಬಂದಿ ಜತೆ ಚರ್ಚೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net