ಮೆಡಿಕಲ್ ಕಾಲೇಜ್​ಗೆ ಸೂಪರ್ ಸ್ಪೆಷಾಲಿಟಿ ಸೌಲಭ್ಯ

Rupali Naik 2+
Published on

ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್​ನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಒದಗಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಶಾಸಕಿ ರೂಪಾಲಿ ನಾಯ್ಕ ಈ ಕುರಿತು ಮಾಹಿತಿ ನೀಡಿದ್ದು, ತಾವು ನೀಡಿದ್ದ ಮನವಿಗೆ ಸ್ಪಂದಿಸಿ ಕ್ರಮ ವಹಿಸಿದ್ದಾಗಿ ಪತ್ರಿಕಾ ಹೇಳಿಕೆ ಮೂಲಕ ವಿವರಿಸಿದ್ದಾರೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 120 ಕೋಟಿ ರೂ. ಮಂಜೂರು ಮಾಡಿ, ಟ್ರಾಮಾ ಸೆಂಟರ್ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಎರಡು ಬಾರಿ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಅವರು ಸ್ಪಂದಿಸಿದ್ದಾರೆ ಎಂದು ರೂಪಾಲಿ ನಾಯ್ಕ ತಿಳಿಸಿದ್ದಾರೆ.

ಆರೋಗ್ಯ ಸೌಲಭ್ಯಗಳ ವಿಷಯದಲ್ಲಿ ಜಿಲ್ಲೆ ತೀರಾ ಹಿಂದುಳಿದಿದೆ. ಹೃದಯಾಘಾತ, ಬ್ರೇನ್ ಹ್ಯಾಮರೇಜ್, ಕಿಡ್ನಿ, ಕ್ಯಾನ್ಸರ್, ಶ್ವಾಸಕೋಶ ಸಮಸ್ಯೆಯಂತಹ ತುರ್ತು ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಜನ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಗಂಭೀರ ಕಾಯಿಲೆ, ಅಪಘಾತದಲ್ಲಿ ತೀವ್ರ ಗಾಯಗೊಂಡವರನ್ನು ದೂರದ ಗೋವಾ, ಮಣಿಪಾಲ, ಮಂಗಳೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಮತ್ತಿತರ ಆಸ್ಪತ್ರೆಗಳಿಗೆ ಕರೆದೊಯ್ಯಬೇಕಿದೆ. ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟ ಉದಾಹರಣೆಗಳೂ ಸಾಕಷ್ಟಿವೆ. ಈ ಎಲ್ಲ ಗಂಭೀರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಅಲ್ಲದೆ, ಆರೋಗ್ಯ ಇಲಾಖೆ ಸೂಚನೆಯಂತೆ ಜಿಲ್ಲಾಡಳಿತದಿಂದ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ತಜ್ಞರ ಸಮಿತಿಯಿಂದ ವರದಿಯೊಂದನ್ನು ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸಿಎಂ ಈ ಬಗ್ಗೆ ಕಡತ ಮಂಡಿಸುವಂತೆ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ 2019ರ ಜುಲೈ 31ರಂದು ಆದೇಶಿಸಿದ್ದರು ಎಂದು ಶಾಸಕಿ ರೂಪಾಲಿ ನಾಯ್ಕ ವಿವರಿಸಿದ್ದಾರೆ.

ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಲೇಬೇಕು ಎನ್ನುವುದು ಜನರ ಬೇಡಿಕೆ ಇತ್ತು. ಅದಕ್ಕಾಗಿ ಸಂಬಂಧಪಟ್ಟ ಸಚಿವರು ಹಾಗೂ ಸಿಎಂ ಅವರನ್ನು ಆಗ್ರಹಿಸುತ್ತಲೇ ಇದ್ದೆ. ಈಗ ಕನಸು ನನಸಾಗುವ ಕಾಲ ಕೂಡಿಬಂದಿದೆ. | ರೂಪಾಲಿ ನಾಯ್ಕ ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net